ಚಿಕ್ಕಮಗಳೂರು : ಜಿಲ್ಲೆಯಲ್ಲಿ ದೇವರ ದಯೆಯಿಂದಾಗಿ ಕೋವಿಡ್-19 ಪ್ರಕರಣ ಪತ್ತೆಯಾಗಿಲ್ಲ. ಆದರೆ, ಕೋವಿಡ್-19 ವಿಚಾರದಲ್ಲಿ ಲಾಕ್ಡೌನ್ ಬಿಟ್ಟರೇ ನಮ್ಮ ಬಳಿ ಬೇರೆ ಯಾವುದೇ ಅಸ್ತ್ರ ಇಲ್ಲ ಎಂದು ಚಿಕ್ಕಮಗಳೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಭೋಜೇಗೌಡ ಹೇಳಿದ್ದಾರೆ.
ಲಾಕ್ಡೌನ್ ಮಾಡುವಾಗ ಯಾವ ಪರಿಣಾಮ ಬೀರುತ್ತದೆ, ಅದನ್ನು ಯಾವ ರೀತಿ ಎದುರಿಸಬೇಕು ಎಂದು ಸರ್ಕಾರ ಹೇಳುತ್ತಿದೆ ಹೊರತು, ಅದನ್ನು ಕಾರ್ಯಗತ ಮಾಡುತ್ತಿಲ್ಲ. ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಹಳ್ಳಿಗಳಲ್ಲಿ ನಿತ್ಯ ಕೆಲಸ ಮಾಡಿ ಊಟ ಮಾಡುವ ವ್ಯವಸ್ಥೆ ಇದೆ. ಇದನ್ನು ಸರ್ಕಾರ ಸರಿಯಾಗಿ ನಿರ್ವಹಿಸುತ್ತಿಲ್ಲ. ರೈತರು ಬೆಳೆದ ಬೆಳೆ ಮಾರುಕಟ್ಟೆಗೆ ತರಲು ಸರ್ಕಾರ ಸರಿಯಾದ ವ್ಯವಸ್ಥೆ ಮಾಡಿಲ್ಲ. ಲಕ್ಷಾಂತರ ಖರ್ಚು ಮಾಡಿದ ಬೆಳೆಗಳು ರೈತರು ಬೀದಿಯಲ್ಲಿ ಬಿಸಾಕುತ್ತಿದ್ದಾರೆ. ಅವರ ಕೈ ಹಿಡಿಯುವ ಕೆಲಸ ಸರ್ಕಾರ ಮಾಡುತ್ತಿಲ್ಲ ಎಂದು ಭೋಜೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಲಾಕ್ಡೌನ್ನಿಂದ ನೂರಾರು ಜನ ಬಡವರಿಗೆ ತೊಂದರೆ ಆಗುತ್ತಿದೆ. ಆದರೆ, ಸಾಹುಕಾರರಿಗೆ ಯಾವುದೇ ತೊಂದರೆಯಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಲವಾರು ಯೋಜನೆ ಜಾರಿ ಮಾಡಿದೆ. ಆದರೆ, ಅವು ಕಾರ್ಯಗತ ಆಗುತ್ತಿಲ್ಲ. ಉಚಿತ ಹಾಲು ಶೇ.20ರಷ್ಟು ಜನರಿಗೆ ತಲುಪುತ್ತಿಲ್ಲ. ಪಡಿತರ ಅಂಗಡಿಯಲ್ಲಿ ಸಾರ್ವಜನಿಕರು ಪಡಿತರ ತೆಗೆದುಕೊಂಡು ಬರುವ ವೇಳೆ ಅವರಿಂದ ಲಂಚ ಪಡೆಯುತ್ತಿದ್ದಾರೆ. ಕಾರ್ಡ್ ಇದ್ದವರಿಗೂ ಸರಿಯಾಗಿ ಪಡಿತರ ಸಿಗುತ್ತಿಲ್ಲ. ಸಾಕಷ್ಟು ವಿಚಾರಗಳು ಗೊಂದಲದಲ್ಲಿವೆ. ಇದನ್ನು ಪರಿಹಾರ ಮಾಡಲು ಸರ್ಕಾರ ವಿಫಲವಾಗಿದೆ ಎಂದು ಎಸ್ ಎಲ್ ಭೋಜೇಗೌಡ ಹೇಳಿದರು.