ಚಿಕ್ಕಮಗಳೂರು: ಕರ್ನಾಟಕದ ಆರು ಹುಲಿ ಸಂರಕ್ಷಿತಾ ಪ್ರದೇಶದಲ್ಲಿ ವರ್ಷದಿಂದ ವರ್ಷಕ್ಕೆ ಹುಲಿಗಳ ಸಂತತಿ ಹೆಚ್ಚಳವಾತ್ತಿದೆ. ಸಿಡಬ್ಲ್ಯೂಎಸ್(ವನ್ಯಜೀವಿ ಅಧ್ಯಯನ ಕೇಂದ್ರ) ಪ್ರಕಾರ ಹುಲಿ ಸಂತತಿ ಹಾಗೂ ಬಲಿ ಪ್ರಾಣಿಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಕುರಿತು ಒಂದು ವಿಶೇಷ ವರದಿ ಇಲ್ಲಿದೆ. ಕರ್ನಾಟದಲ್ಲಿರುವಂತಹ ಹುಲಿ ಸಂರಕ್ಷಿತಾ ಅರಣ್ಯ ಪ್ರದೇಶದಲ್ಲಿ ವರ್ಷದಿಂದ ವರ್ಷಕ್ಕೆ ಹುಲಿಗಳ ಸಂತತಿಯಲ್ಲಿ ಹೆಚ್ಚಳವಾಗಿದೆ. ಈ ಬಗ್ಗೆ ಸಂಶೋಧನೆ ಕೂಡ ನಡೆಸಲಾಗಿದೆ. ಪ್ರಮುಖವಾಗಿ ಉಲ್ಲಾಸ್ ಕಾರಂತ್ ಅವರು ಈ ಬಗ್ಗೆ ಹೆಚ್ಚಿನ ಸಂಶೋದನೆ ಮಾಡಿದ್ದು, 1986ರಲ್ಲಿ ಈ ಕುರಿತು ವೈಜ್ಞಾನಿಕವಾಗಿ ಸಂಶೋಧನೆಯನ್ನು ಪ್ರಾರಂಭ ಮಾಡಿದರು ಎಂದು ಮೂಲಗಳು ತಿಳಿಸಿವೆ.
ಮೊದಲು ಹುಲಿ ಗಣತಿ ಬಗ್ಗೆ ಅವೈಜ್ಞಾನಿಕ ಸಂಶೋಧನೆಯಿಂದಾಗಿ ಸರಿಯಾದ ಮಾಹಿತಿ ಸಿಗುತ್ತಿರಲಿಲ್ಲ. ನಂತರ ಇವರು ಸಂಶೋಧನೆಯಲ್ಲಿ ತಂದ ಬದಲಾವಣೆಗಳು ಹುಲಿಗಳ ಸಂತತಿಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳಲು ಸಹಕಾರಿಯಾಗಿದೆ. ಹುಲಿಗಳ ಹೆಚ್ಚಳಕ್ಕೆ ಪ್ರಮುಖವಾದ ಕಾರಣ ಎಂದರೆ ಬಲಿ ಪ್ರಾಣಿಗಳು. 1986ಕ್ಕೂ ಮೊದಲು 86 ಹುಲಿಗಳು ಕಂಡು ಬಂದಿದ್ದವು. 1986ರ ನಂತರ ನಿರಂತರ ಸಂಶೋಧನೆಯ ಪ್ರಕಾರ ಇಲ್ಲಿಯವರೆಗೂ 520ಕ್ಕೂ ಹೆಚ್ಚು ಹುಲಿಗಳು ಕಂಡು ಬಂದಿವೆ.
ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಅಭಯಾರಣ್ಯದಲ್ಲಿ 42 ರಿಂದ 46 ಹುಲಿಗಳು ಕಂಡು ಬರುತ್ತಿವೆ ಎಂದು ಚಿಕ್ಕಮಗಳೂರು ಜಿಲ್ಲಾ ಅರಣ್ಯ ಇಲಾಖೆ ಮಾಹಿತಿ ನೀಡಿದೆ. ಜಿಲ್ಲೆಯಲ್ಲಿ ರಕ್ಷಿತಾರಣ್ಯ ಹಾಗೂ ಅಭಯಾರಣ್ಯ, ಹುಲಿ ಸಂರಕ್ಷಣಾ ಕೇಂದ್ರ ಇರುವುದರಿಂದ ಹುಲಿಗಳ ಸಂತತಿ ಹೆಚ್ಚಳವಾಗಿದೆ. ಇಲ್ಲಿನ ನೈಸರ್ಗಿಕ ಬೆಟ್ಟಗಳು ಹಾಗೂ ಅರಣ್ಯಗಳು ಜಿಲ್ಲೆಯಲ್ಲಿ ಹುಲಿಗಳ ವಾಸಸ್ಥಾನಕ್ಕೆ ಪೂರಕವಾಗಿದೆ.
ಹುಲಿಗಳ ಸಂಖ್ಯೆ ಏರಿಕೆ: ಪ್ರಮುಖವಾಗಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಹುಲಿಗಳ ಸಂಖ್ಯೆ ಏರಿಕೆಗೆ ಹಲವು ಕಾರಣಗಳಿವೆ. ಪ್ರಮುಖವಾಗಿ ಇಲ್ಲಿನ ರಕ್ಷಣಾ ವ್ಯವಸ್ಥೆ. ಹುಲಿ ಬಗ್ಗೆ ಇರುವಂತಹ ಕಾಳಜಿ. ಅರಣ್ಯ ಪ್ರದೇಶದಲ್ಲಿ ಬಲಿ ಪ್ರಾಣಿಗಳು ಹೆಚ್ಚಾಗಿರುವುದು. ಇನ್ನು ಇಲ್ಲಿನ ವಾತವರಣ ಹುಲಿಗಳಿಗೆ ಹೇಳಿ ಮಾಡಿಸಿದ ಹಾಗಿದೆ. ಜತೆಗೆ ಪರಿಸರ ಸಂಘಟನೆಗಳು ವಹಿಸಿರುವ ಮುತುವರ್ಜಿಗಳು ಕೂಡ ಕಾರಣ. ಭದ್ರಾ ಅಭಯಾರಣ್ಯದಲ್ಲಿ ಈವರೆಗೆ 45ಕ್ಕೂ ಹೆಚ್ಚು ಹುಲಿಗಳು ಕಂಡು ಬಂದಿವೆ. ಹುಲಿಗಳ ರಕ್ಷಣಾ ವ್ಯವಸ್ಥೆ ಹೆಚ್ಚಾಗಿರುವುದರಿಂದ ವರ್ಷದಿಂದ ವರ್ಷಕ್ಕೆ ಈ ಭಾಗದಲ್ಲಿ ಹುಲಿಗಳ ಸಂತತಿ ಹೆಚ್ಚಾಗಲು ಪ್ರಮುಖ ಕಾರಣ ಎನ್ನಲಾಗಿದೆ.
ಒಟ್ಟಾರೆ ರಾಜ್ಯದಲ್ಲಿರುವ ಹುಲಿ ಸಂರಕ್ಷಿತಾ ಪ್ರದೇಶದಲ್ಲಿ ವರ್ಷದಿಂದ ವರ್ಷಕ್ಕೆ ಹುಲಿಗಳ ಸಂತತಿ ಹೆಚ್ಚಳವಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಅಭಯಾರಣ್ಯದಲ್ಲಿಯೂ ಅಷ್ಟೇ ಪ್ರಮಾಣದಲ್ಲಿ ಹುಲಿಗಳ ಸಂಖ್ಯೆ ಏರಿಕೆಯಾಗುತ್ತಿದೆ. ಇದಕ್ಕೆ ಪರಿಸರ ಪ್ರಿಯರು ಹಾಗೂ ಪರಿಸರ ತಜ್ಞರು ಹರ್ಷ ವ್ಯಕ್ತಪಡಿಸಿದಿದ್ದಾರೆ.
ಹುಲಿ ಬದುಕಲು ಅನುಕೂಲಕರವಾಗಿರುವ ಅರಣ್ಯ ಪ್ರದೇಶಗಳನ್ನು ಇನ್ನಷ್ಟು ಗುರುತಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತ್ವರಿತವಾಗಿ ಸಂರಕ್ಷಿತ ಪ್ರದೇಶಗಳಾಗಿ ಘೋಷಿಸುವ ಮೂಲಕ ಹುಲಿಗಳ ಸಂಖ್ಯೆ ಹೆಚ್ಚಿಸಲು ಕ್ರಮವಹಿಸಲಿ ಎನ್ನುತ್ತಾರೆ-ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತ ಭರತ್ ಸಿ.ವಿ.
ಇದನ್ನೂ ಓದಿ: ಮೊದಲ ಬಾರಿಗೆ ಪಿಎಂ ವನ್ಯಜೀವಿ ಸಫಾರಿ: ಪ್ರಧಾನಿ ಮೋದಿ ಬಂಡೀಪುರವನ್ನೇ ಆಯ್ಕೆ ಮಾಡಿಕೊಂಡಿದ್ದು ಏಕೆ..?