ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ದಿನದಿಂದ ದಿನಕ್ಕೆ ಕಾಡು ಪ್ರಾಣಿಗಳ ಹಾವಳಿ ಹೆಚ್ಚುತ್ತಲೇ ಇದೆ. ಇತ್ತೀಚೆಗೆ ಹುಲಿ ದಾಳಿಗೆ ಎರಡು ಜಾನುವಾರು ಬಲಿಯಾಗಿವೆ.
ಒಂದು ಕಡೆ ಕಾಡು ಪ್ರಾಣಿಗಳು ರೈತರು ಬೆಳೆದಂತಹ ಬೆಳೆಗಳ ಮೇಲೆ ದಾಳಿ ನಡೆಸುತ್ತಿದ್ದರೆ, ಇನ್ನು ಕೆಲವು ಪ್ರಾಣಿಗಳು ಜಾನುವಾರಗಳ ಮೇಲೆ ದಾಳಿ ನಡೆಸಿ ತಿಂದು ತೇಗಿ ಹೋಗುತ್ತಿವೆ.
ಅದೇ ರೀತಿ ಇಂದು 2 ಜಾನುವಾರುಗಳ ಮೇಲೆ ಹುಲಿ ದಾಳಿ ನಡೆಸಿದ್ದು, ಎರಡು ಜಾನುವಾರುಗಳನ್ನು ಕೊಂದು ಹಾಕಿರುವ ಪ್ರಕರಣ ಮಲೆನಾಡು ಭಾಗದಲ್ಲಿ ಬೆಳಕಿಗೆ ಬಂದಿದೆ.
ಚಿಕ್ಕಮಗಳೂರು ಜಿಲ್ಲೆಯ ಎನ್ಆರ್ ಪುರ ತಾಲೂಕಿನ ಸಮೀಪ ಕುಂಬರಗೋಡು ಗ್ರಾಮದ ಕೆಂಚಾ ಶೆಟ್ಟಿ ಎಂಬುವರಿಗೆ ಸೇರಿದ ಎರಡು ಜಾನುವಾರುಗಳ ಮೇಲೆ ಹುಲಿ ದಾಳಿ ಮಾಡಿ ಕೊಂದು ಹಾಕಿದೆ.
ಈ ಭಾಗದಲ್ಲಿ ಹಲವಾರು ಬಾರಿ ಹುಲಿ ಕಾಣಿಸಿಕೊಂಡಿದ್ದು, ಸ್ಥಳೀಯರು ಅನೇಕ ಬಾರಿ ಅರಣ್ಯ ಇಲಾಖೆಯ ಗಮನಕ್ಕೆ ತಂದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಎನ್ನಲಾಗಿದೆ.
ಈ ವಿಚಾರ ತಿಳಿದ ಕೂಡಲೇ ಶೃಂಗೇರಿಯ ಶಾಸಕ ಟಿ.ಡಿ.ರಾಜೇಗೌಡ ಸ್ಥಳಕ್ಕೆ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದರು.
ಕೂಡಲೇ ಈ ಭಾಗದಲ್ಲಿ ನಡೆಯುತ್ತಿರುವ ಹುಲಿ ಹಾವಳಿಯನ್ನು ನಿಯಂತ್ರಿಸಲು ಅರಣ್ಯ ಇಲಾಖೆಯವರಿಗೆ ಸೂಚನೆ ನೀಡಿದ್ದು, ಹುಲಿ ದಾಳಿಯಿಂದ ಜಾನುವಾರುಗಳನ್ನು ಕಳೆದುಕೊಂಡ ಮಾಲೀಕರಿಗೆ ಪರಿಹಾರಧನ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.