ಚಿಕ್ಕಮಗಳೂರು: ಹಸುಗಳ ಮೇಲೆ ಹುಲಿಯೊಂದು ದಾಳಿ ನಡೆಸಿ ಮೂರು ಹಸುಗಳನ್ನು ಕೊಂದು ಹಾಕಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕನ್ನಗೆರೆ ಕಣ್ಣ ಎಸ್ಟೇಟ್ ಬಳಿ ನಡೆದಿದೆ.
ಕಣ್ಣ ಎಸ್ಟೇಟ್ ಬಳಿ ಇದ್ದಂತಹ ಮೂರು ಹಸುಗಳ ಮೇಲೆ ಹುಲಿಯೊಂದು ದಾಳಿ ನಡೆಸಿ ಕೊಂದು ಹಾಕಿದೆ. ಅದರಲ್ಲಿ ಒಂದು ಹಸುವನ್ನು ಸಂಪೂರ್ಣವಾಗಿ ತಿಂದು ಹಾಕಿರುವ ವ್ಯಾಘ್ರ, ಗರ್ಭಧರಿಸಿದ್ದ ಹಸುವಿನ ಮೇಲು ದಾಳಿ ನಡೆಸಿ ಕೊಂದು ಹಾಕಿದೆ. ಇನ್ನು ಅಲ್ಲಿದ್ದಂತಹ ಮತ್ತೊಂದು ಹಸು ತಪ್ಪಿಸಿಕೊಂಡು ಕನ್ನಗೆರೆ ಗ್ರಾಮಕ್ಕೆ ಓಡಿ ಬಂದಿದ್ದು, ಅದರ ಮೇಲೂ ಹುಲಿ ದಾಳಿ ನಡೆಸಿರುವ ಗಾಯದ ಗುರುತುಗಳು ಪತ್ತೆಯಾಗಿವೆ.
ಇದೇ ಭಾಗದಲ್ಲಿ ಕೆಲವು ತಿಂಗಳುಗಳಿಂದ ಎರಡು ಹುಲಿಗಳು ಸಂಚರಿಸುತ್ತಿರುವುದನ್ನು ಕಂಡಿರುವುದಾಗಿ ಗ್ರಾಮಸ್ಥರು ತಿಳಿಸಿದ್ದು, ಅಲ್ಲದೇ ಇಲ್ಲಿರುವ ಜಾನುವಾರುಗಳ ಮೇಲೆ ಹುಲಿ ದಾಳಿ ನಡೆಸಿ ತಿಂದು ಹಾಕುತ್ತಿವೆ. ಕೂಡಲೇ ಹುಲಿಗಳನ್ನು ಹಿಡಿದು ಅರಣ್ಯಕ್ಕೆ ಬಿಡುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿ ಹುಲಿಗಳ ಹುಡುಕಾಟಕ್ಕೆ ಮುಂದಾಗಿದ್ದಾರೆ.
ಇದನ್ನೂ ಓದಿ: ಹುಲಿ ದಾಳಿಗೆ ಹಸು ಬಲಿ: ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರ ಆಕ್ರೋಶ