ಚಿಕ್ಕಮಗಳೂರು: ವಾಹನ ಸವಾರನ ಅಜಾಗರೂಕತೆಯೋ ಅಥವಾ ಉದ್ದೇಶಪೂರ್ವಕವಾಗಿ ನಡೆದ ಕೃತ್ಯವೋ ಸದ್ಯಕ್ಕೆ ಹೇಳಲಾಗದು. ಆದ್ರೆ, ರಸ್ತೆಯಲ್ಲಿ ವಾಹನ ಡಿಕ್ಕಿಯಾಗಿ ಮೂರು ಹಸುಗಳ ದೇಹಭಾಗಗಳು ಛಿದ್ರವಾಗಿ ಬಿದ್ದಿದ್ದವು. ಕೊಪ್ಪ ತಾಲೂಕಿನ ಕುದುರೆಗುಂಡಿ ಗ್ರಾಮದಲ್ಲಿ ಈ ಅಮಾನವೀಯ ಘಟನೆ ನಡೆದಿದೆ.
ಜಿಲ್ಲೆಯ ರಸ್ತೆಯಲ್ಲಿ ಜಾನುವಾರುಗಳು ಹೋಗುವ ವೇಳೆ ಕೆಲ ಕಿಡಿಗೇಡಿಗಳು ಮೂರು ಹಸುಗಳ ಮೇಲೆ ಉದ್ದೇಶಪೂರ್ವಕವಾಗಿಯೇ ವಾಹನ ಹತ್ತಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ವಾಹನ ಗುದ್ದಿದ ರಭಸಕ್ಕೆ ಮೂರು ಹಸುಗಳ ದೇಹ ರಸ್ತೆಯಲ್ಲಿ ಛಿದ್ರ ಛಿದ್ರವಾಗಿ ಬಿದ್ದಿತ್ತು.
ಅಪಘಾತದಲ್ಲಿ ಮಡಿದ ಹಸುಗಳ ದೇಹದ ಭಾಗಗಳನ್ನು ನೋಡಿದ ಗ್ರಾಮಸ್ಥರು ಕಣ್ಣೀರು ಹಾಕುತ್ತಿದ್ದರು. ಅಪಘಾತ ಮಾಡಿರುವ ವಾಹನ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಪತ್ತೆಗೆ ಕೊಪ್ಪ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಕೆಲ ದಿನಗಳ ಹಿಂದೆ ವಿಷವಿಕ್ಕಿದ ಘಟನೆ:
ಕಳೆದ ನಾಲ್ಕು ದಿನಗಳ ಹಿಂದೆ ಹಲಸಿನ ಹಣ್ಣಿಗೆ ವಿಷ ಹಾಕಿ ಕೆಲ ಕಿಡಿಗೇಡಿಗಳು ಮೂರು ಹಸುಗಳನ್ನು ಕೊಂದ ಸುದ್ದಿ ಮಾಸುವ ಮುನ್ನವೇ ಈ ಪ್ರಕರಣ ನಡೆದಿದೆ.