ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿರುವ ಅವಧೂತ ವಿನಯ್ ಗುರೂಜಿ ಅವರನ್ನು ಭೇಟಿಯಾಗಲು ಡಿಸಿಎಂ ಗೋವಿಂದ ಕಾರಜೋಳ ಚಿಕ್ಕಮಗಳೂರಿಗೆ ಆಗಮಿಸಿದ್ದಾರೆ.
ಇದೇ ಸಂದರ್ಭ ಮಾತನಾಡಿದ ಅವರು, ನನ್ನ ಮಗ ಎರಡೂವರೆ ತಿಂಗಳು ವೆಂಟಿಲೇಟರ್ನಲ್ಲಿದ್ದ. ವಿನಯ್ ಗುರೂಜಿ ಬೆಂಗಳೂರಿಗೆ ಬಂದು ನಿಮ್ಮ ಮಗನಿಗೆ ಏನೂ ಆಗಲ್ಲ ಎಂದಿದ್ದರು. ನನ್ನ ಮಗ ಈಗ ಆರಾಮಾಗಿದ್ದಾನೆ. ಹಾಗಾಗಿ ಅವರನ್ನು ಪೂಜೆಗೆ ಕರೆಯಲು ಬಂದಿದ್ದೇನೆ. ನಾಳೆ ವಿನಯ್ ಗೂರೂಜಿ ಭೇಟಿ ಮಾಡುತ್ತೇನೆ ಎಂದು ಹೇಳಿದರು.
ಮೈಸೂರಿನಲ್ಲಿ ಕಾಂಗ್ರೆಸ್ ಒಳಜಗಳ ವಿಚಾರ ಕುರಿತು ಮಾತನಾಡಿ, ಸಿದ್ದುದು ಒಂದು ಗುಂಪು, ಡಿಕೆಶಿದು ಮತ್ತೊಂದು ಗುಂಪು, ಮಲ್ಲಿಕಾರ್ಜುನ ಖರ್ಗೆಯವರದ್ದು ಇನ್ನೊಂದು ಗುಂಪು. ಕಾಂಗ್ರೆಸ್ ಒಡೆದ ಮನೆಯಾಗಿ ಮೂರು ಗುಂಪುಗಳಾಗಿವೆ. ಮೂರು ಗುಂಪುಗಳ ಮಧ್ಯೆ 24 ಗಂಟೆಯೂ ಗುದ್ದಾಟ ನಡೆದಿರುತ್ತೆ. ಆ ಗುದ್ದಾಟ ಹೊಸದಲ್ಲ, ಅದರಲ್ಲೇ ಕಾಂಗ್ರೆಸ್ ನೆಲಕಚ್ಚಿದೆ ಎಂದು ಹೇಳಿದರು.
2006ರಲ್ಲಿ ಬಿಜೆಪಿಯವರು ಜೆಡಿಎಸ್ಗೆ ಬರಲು ಸಿದ್ಧರಿದ್ರು ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ಹಾಸ್ಯಾಸ್ಪದ. ಮೋದಿ ನೇತೃತ್ವದಲ್ಲಿ ದೇಶವೇ ಭಾರತೀಯ ಜನತಾ ಪಕ್ಷವಾಗಿದೆ. 23 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಕುಮಾರಸ್ವಾಮಿ ಆಶೀರ್ವಾದದಿಂದಲೇ ಬಂದಿದೆಯಾ? ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಬಿಜೆಪಿ ಸದೃಢವಾಗಿದೆ. 2009ರಲ್ಲಿ ಮೋದಿ ಭಾರತ ಕಾಂಗ್ರೆಸ್ ಮುಕ್ತ ಭಾರತವಾಗುತ್ತೆ ಎಂದಿದ್ದರು. ಇಂದು ಕಾಂಗ್ರೆಸ್ ಮುಕ್ತ ಭಾರತವಾಗಿದೆ, ಕಾಂಗ್ರೆಸ್ ಎಲ್ಲಿದೆ ಎಂದು ಹೇಳಿದರು.