ಚಿಕ್ಕಮಗಳೂರು : ಬೈಕ್ ಕಳ್ಳತನ ಮಾಡುತ್ತಿದ್ದ ಇಬ್ಬರೂ ಆರೋಪಿಗಳನ್ನು ಬಂಧಿಸುವಲ್ಲಿ ಚಿಕ್ಕಮಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಮೋದ್ ಹಾಗೂ ಕಿರಣ್ ಎಂಬ ಇಬ್ಬರೂ ಆರೋಪಿಗಳನ್ನು ತರೀಕೆರೆ ತಾಲೂಕಿನ ಲಿಂಗದ ಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಕದ್ದ ಬೈಕ್‌ನ ಬೇರೆಯವರಿಗೆ ಮಾರಿ ಯಾಮಾರಿಸುತ್ತಿದ್ದರು.
ಬಜಾಜ್ ಫೈನಾನ್ಸ್ನಲ್ಲಿ ಕೆಲಸ ಮಾಡುತ್ತಿದ್ದು, ಸೀಜ್ ಆದಂತಹ ಗಾಡಿಗಳು. ಇದನ್ನು ಈಗ ಖರೀದಿಸಿ ನಂತರ ಎರಡೂ ತಿಂಗಳಿನಲ್ಲಿ ಎಲ್ಲಾ ಕ್ಲಿಯರನ್ಸ್ ಮಾಡಿಕೊಡುವುದಾಗಿ ನಂಬಿಸಿ ಬೈಕ್ ಮಾರಾಟ ಮಾಡುತ್ತಿದ್ದರು. ಈ ವೇಳೆ ಜನರಿಗೆ ಮೋಸ ಮಾಡಿ ಏಳು ಬೈಕ್ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ.
ಬಂಧಿತರಿಂದ ಐದು ಪಲ್ಸರ್ ಬೈಕ್, ಒಂದು ಪ್ಲಾಟಿನಾ, ಬಜಾಟ್ ಸಿಟಿ 100 ಬೈಕ್ ವಶಕ್ಕೆ ಪಡೆಯಲಾಗಿದೆ. ಇಬ್ಬರೂ ಆರೋಪಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.
ಶಿಕಾರಿಗೆ ಬಳಸುತ್ತಿದ್ದ ಅಕ್ರಮ ಬಂದೂಕು ವಶಕ್ಕೆ : ಜಿಲ್ಲೆಯ ಕುದುರಮುಖ ರಾಷ್ಟ್ರೀಯ ಉದ್ಯಾನ ವನದ ವ್ಯಾಪ್ತಿಯಲ್ಲಿ ಕುದುರೆಮುಖ ಪೊಲೀಸರು ಕಾರ್ಯಾಚರಣೆ ವೇಳೆ ಶಿಕಾರಿಗೆ ಬಳಸುತ್ತಿದ್ದ ಅಕ್ರಮ ಬಂದೂಕು ವಶಕ್ಕೆ ಪಡೆದಿದ್ದಾರೆ.
ಎಸ್ ಕೆ ಮೆಗಲನ್ ಕೋಣೆ ಗೂಡಿಗೆ ಗ್ರಾಮದ ಚಂದ್ರೇಗೌಡ ಎಂಬುವರ ಮನೆಯ ಹತ್ತಿರ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಒಬ್ಬ ವ್ಯಕ್ತಿಯು ಈ ಬಂದೂಕನ್ನು ಮತ್ತು ಕೈಯಲ್ಲಿ ಒಂದು ಸಣ್ಣ ಕಪ್ಪು ಚೀಲವನ್ನು ಹಿಡಿದುಕೊಂಡು ಹೋಗುತ್ತಿದ್ದ. ಪೊಲೀಸರು ನೋಡಿದ ಕೂಡಲೇ ಕೈಯಲ್ಲಿದ್ದ ಬಂದೂಕು ಮತ್ತು ಚೀಲವನ್ನು ಅಲ್ಲಿಯೇ ಬಿಸಾಕಿ ಪರಾರಿಯಾಗಿದ್ದಾನೆ.
ಈತನ ಬಗ್ಗೆ ವಿಚಾರಿಸಿದಾಗ ಅದೇ ಗ್ರಾಮದ ಲಕ್ಷ್ಮಣ ಎಂದು ತಿಳಿದು ಬಂದಿದೆ. ಲಕ್ಷ್ಮಣನ ಮನೆಗೆ ಹೋಗಿ ವಿಚಾರ ಮಾಡಿದಾಗ ಮನೆಯಲ್ಲಿ ಅವರ ಪತ್ನಿಯು ತನ್ನ ಗಂಡ ಕೋವಿಯನ್ನು ಹಿಡಿದುಕೊಂಡು ಕಾಡಿನ ಕಡೆ ಹೋಗಿರುವುದಾಗಿ ಮಾಹಿತಿ ನೀಡಿದ್ದಾರೆ.
ಈ ವೇಳೆ ಬಂದೂಕಿಗೆ ಯಾವುದೇ ಪರವಾನಿಗೆ ಇಲ್ಲವೆಂದು ತಿಳಿದು ಬಂದಿದೆ. ಕೂಡಲೇ ಪೊಲೀಸರು ಬಂದೂಕು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.