ಚಿಕ್ಕಮಗಳೂರು: ಜಿಲ್ಲೆಯಲ್ಲಿ ಶ್ರೀರಾಮಸೇನೆ ನಡೆಸುವ ದತ್ತಮಾಲಾ ಅಭಿಯಾನಕ್ಕೆ ಪ್ರಾರಂಭದಲ್ಲೇ ಅಡೆತಡೆಗಳು ಎದುರಾಗುವ ಲಕ್ಷಣಗಳು ಗೋಚರಿಸುತ್ತಿವೆ. ಸಾಯಿ ಬಾಬಾ ಮಂದಿರದಲ್ಲಿ ಇರುವ ದತ್ತ ಭಕ್ತರ ಇಷ್ಟದೈವ ದತ್ತಾತ್ರೇಯ ಸ್ವಾಮಿ ವಿಗ್ರಹ ಹೊತ್ತೊಯ್ಯಲು ಬಂದಿದ್ದ ಪೊಲೀಸರ ನಡೆಗೆ ದತ್ತ ಮಾಲಧಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಾರಿಯ ಅಭಿಯಾನಕ್ಕೆ ಕಾರವಾರದಿಂದ ಭಕ್ತರು ದತ್ತಾತ್ರೇಯ ಸ್ವಾಮಿ ವಿಗ್ರಹವನ್ನು ದಾನ ಮಾಡಿದ್ದಾರೆ. ಈ ವಿಗ್ರಹವನ್ನು ಸಾಯಿ ಬಾಬಾ ಮಂದಿರದಲ್ಲಿ ಇಡಲಾಗಿದೆ. ಶೋಭಾಯಾತ್ರೆ ನಂತರವೂ ಮೂರ್ತಿಯನ್ನು ಮಂದಿರದಲ್ಲೇ ಇಡಲಾಗುತ್ತದೆ. ಮಂದಿರದಲ್ಲೇ ಪ್ರತಿಷ್ಠಾಪಿಸಲು ದೇವಸ್ಥಾನ ಆಡಳಿತ ಮಂಡಳಿ ಅನುಮತಿ ಪಡೆದಿದ್ದೇವೆ. ಆದರೆ, ಯಾರ ಮಾತನ್ನೋ ಕೇಳಿ ಪೊಲೀಸರು, ಮಂದಿರದಲ್ಲಿರುವ ಮೂರ್ತಿಯನ್ನು ಹೊತ್ತೊಯ್ಯಲು ನಿನ್ನೆ ಮಧ್ಯರಾತ್ರಿ ದೇವಸ್ಥಾನಕ್ಕೆ ಆಗಮಿಸಿದ್ದಾರೆ. ಧಾರ್ಮಿಕ ಆಚರಣೆಗೆ ಪೊಲೀಸ್ ಇಲಾಖೆ ಮೂಗು ತೂರಿಸುವುದು ಸರಿಯಲ್ಲ ಎಂದು ದತ್ತ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕದ್ದುಮುಚ್ಚಿ ಮೂರ್ತಿ ಪ್ರತಿಷ್ಠಾಪಿಸುವ ದರ್ದು ನಮಗಿಲ್ಲ. ಯಾವುದೇ ರೀತಿಯ ಕಾನೂನು ಉಲ್ಲಂಘನೆ ಮಾಡಿಲ್ಲ. ಶೋಭಾಯಾತ್ರೆ ಮುಗಿಸಿ ಮತ್ತೆ ಸಾಯಿ ಮಂದಿರದಲ್ಲೇ ವಿಗ್ರಹವಿಟ್ಟು ಪೂಜಿಸುತ್ತೇವೆ ಎಂದು ಹೇಳುತ್ತಿದ್ದರೂ ಪೋಲಿಸರು ಕೇಳುತ್ತಿಲ್ಲ. ಹಾಗೇನಾದರೂ ಮಾಡುವುದಾದರೆ ರಾಜರೋಷವಾಗಿ ಪ್ರತಿಷ್ಠಾಪಿಸುತ್ತೇವೆ. ನಂಬಿಕೆ ಇಲ್ಲದಿದ್ದರೆ ಮೂರ್ತಿಯನ್ನು ತಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಕಚೇರಿಯಲ್ಲೇ ಇಡುತ್ತೇವೆ. ನೀವೇ ಪೂಜೆ ಮಾಡಿ ಎಂದು ಭಕ್ತರು ತಿಳಿಸಿದ್ದಾರೆ.
ಪೊಲೀಸರು ಮಧ್ಯರಾತ್ರಿ 12 ಗಂಟೆಗೆ ಬಂದು ಬೀಗ ಕೇಳಿದ್ದಾರೆ. ಏಕೆಂದು ಕೇಳಿದ್ದಕ್ಕೆ ಮೂರ್ತಿಯನ್ನ ತೆಗೆದುಕೊಂಡು ಹೋಗಲು ಬಂದಿದ್ದೇವೆ ಅಂತಾ ಹೇಳಿದ್ದಾರೆ. ಕೂಡಲೇ ಆಡಳಿತ ಮಂಡಳಿ ಹಾಗೂ ಭದ್ರತಾ ಸಿಬ್ಬಂದಿ ದತ್ತ ಭಕ್ತರಿಗೆ ಕರೆ ಮಾಡಿ ವಿಷಯ ತಿಳಿಸಿದರು. ಆದರೆ, ಪೊಲೀಸರು ಭದ್ರತೆ ನೀಡಲು ಬಂದಿದ್ದೇವೆ ಎನ್ನುತ್ತಿದ್ದಾರೆ. ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ನಾಳೆ ಪಡಿ ಸಂಗ್ರಹಿಸಲಿರುವ ಭಕ್ತರು, ಶನಿವಾರ ಧರ್ಮ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದರು. ಭಾನುವಾರ ಬೃಹತ್ ಶೋಭಾಯಾತ್ರೆ ನಡೆಸಿ ದತ್ತಪೀಠಕ್ಕೆ ತೆರಳಿ ದತ್ತಪಾದುಕೆ ದರ್ಶನ ಪಡೆಯಲಿದ್ದಾರೆ.