ಚಿಕ್ಕಮಗಳೂರು: ಕೋವಿಡ್ ಸಮಯದಲ್ಲಿ ಮನೆ ಮನೆಗೆ ತೆರಳಿ ಪಾಠ ಮಾಡುವ ವೇಳೆ ಶಿಕ್ಷಕರೊಬ್ಬರು ಮೃತಪಟ್ಟಿದ್ದು, ಕುಟುಂಬ ಕಣ್ಣೀರಲ್ಲಿ ಕೈ ತೊಳೆಯುತ್ತಿರುವ ಘಟನೆ ಕಡೂರಿನಲ್ಲಿ ನಡೆದಿದೆ.
ಎರಡು ತಿಂಗಳ ಹಿಂದೆ ಶಿಕ್ಷಕ ಪುಟ್ಟಪ್ಪ ಮನೆ ಮನೆಗೆ ತೆರಳಿ ಮಕ್ಕಳಿಗೆ ಪಾಠ ಹೇಳಿಕೊಡುವ ವೇಳೆ ಕೊರೊನಾ ತಗುಲಿ ಮೃತಪಟ್ಟಿದ್ದರು. ಕುಟುಂಬಕ್ಕೆ ಆಧಾರಸ್ತಂಭವಾಗಿದ್ದ ಪುಟ್ಟಪ್ಪನನ್ನು ಕಳೆದುಕೊಂಡ ಕುಟುಂಬ ಕಣ್ಣೀರಲ್ಲಿ ಕೈ ತೊಳೆಯುತ್ತಿದೆ.
ಶಿಕ್ಷಕ ವೃತ್ತಿಯ ಜತೆಗೆ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ಉಪಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದ ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಸಾಲ ಮಾಡಿ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುತ್ತಿದ್ದರು. ಆದರೆ, ಇಂದು ಕುಟುಂಬಕ್ಕೆ ಯಾವುದೇ ಆದಾಯವಿಲ್ಲ. ಸಾಲ ತೀರಿಸುವವರೂ ಇಲ್ಲ. ಇತ್ತ ಸರ್ಕಾರ ಕೂಡ ಕುಟುಂಬಕ್ಕೆ ಪರಿಹಾರ ನೀಡಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.
ಮಕ್ಕಳ ಮುಂದಿನ ಭವಿಷ್ಯ ನೆನೆದು ಪುಟ್ಟಪ್ಪ ಪತ್ನಿ ರಾಧಾ ಕಣ್ಣೀರು ಹಾಕುತ್ತಿದ್ದಾರೆ. ನಮ್ಮ ಮುಂದಿನ ಜೀವನ ಹೇಗೆ ಎಂಬ ಯೋಚನೆಯಲ್ಲಿ ಮುಳುಗಿರುವ ಇವರು, ಸರ್ಕಾರ ನೆರವಿಗೆ ಧಾವಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.