ಚಿಕ್ಕಮಗಳೂರು: ಚಿಕ್ಕಮಗಳೂರಿನ ಬಾಳೆಹೊನ್ನೂರಿನ ಶ್ರೀ ರಂಬಾಪುರಿ ಪೀಠದಲ್ಲಿ ನಡೆದ ಯುಗಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ, ಶೋಭಾ ಕರಂದ್ಲಾಜೆ, ಸಿ.ಟಿ.ರವಿ ಹಾಗೂ ಬಸವರಾಜ್ ಬೊಮ್ಮಾಯಿ ಅವರನ್ನು ಹಾಡಿ ಹೊಗಳಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಸುರೇಶ್ ಅಂಗಡಿ, ಸಂಸದೆ ಶೋಭಾ ಕರಂದ್ಲಾಜೆ ಆದಿಶಕ್ತಿ ಇದ್ದಂತೆ ಹಾಗೂ ಗೃಹ ಮಂತ್ರಿ ಬಸವರಾಜ್ ಬೊಮ್ಮಯಿ ಭೀಮ ಇದ್ದಂತೆ ಎನ್ನುವ ಮೂಲಕ ಹಾಡಿ ಹೊಗಳಿದ್ದಾರೆ. ಶೋಭಾ ಕರಂದ್ಲಾಜೆ ಅವರೇ ಎಂದು ಹೇಳುವ ಮೂಲಕ ಭಾಷಣ ಆರಂಭಿಸಿದ ಅವರು, ರಂಬಾಪುರಿ ಪೀಠದ ಶ್ರೀಗಳು ಕೇವಲ ಒಂದು ಸಮಾಜದ ಸ್ವಾಮೀಜಿಯಲ್ಲ. ಅವರಿಗೆ ಸರ್ವರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವಂತಹ ಶಕ್ತಿ ಇದೆ ಎಂದರು.
ಕಾಶಿಯಿಂದ ಉಜ್ಜೈನಿಗೆ ರೈಲು ಸೇವೆ ನೀಡಿದ್ದೇವೆ. ಈಗ ಈ ಪೀಠವನ್ನು ನೋಡುವ ಭಾಗ್ಯ ಸಿಕ್ಕಿದೆ. ಈ ಭಾಗ್ಯ ಸಿಕ್ಕಿದ್ದು ಆದಿಶಕ್ತಿ ಶೋಭಾ ಕರಂದ್ಲಾಜೆ ಹಾಗೂ ಸಿ.ಟಿ.ರವಿ ಅವರಿಂದ. ಯಶವಂತಪುರದಿಂದ ಕಾರವಾರಕ್ಕೆ ರೈಲು ಇರಲಿಲ್ಲ. ಈಗ ಆ ಸೌಭಾಗ್ಯ ಸಿಕ್ಕಿದೆ. ಇರುವ ಎಲ್ಲಾ ಪ್ರಾಜೆಕ್ಟ್ ಪೂರ್ತಿ ಮಾಡಿ ಬಾಳೆಹೊನ್ನೂರಿನಿಂದ ಚಿಕ್ಕಮಗಳೂರಿಗೆ ರೈಲು ನೀಡುವ ಶಕ್ತಿಯನ್ನು ವೀರ ಸೋಮೇಶ್ವರ ನನಗೆ ನೀಡಲಿ ಎಂದು ಪ್ರಾರ್ಥಿಸಿದರು.