ಚಿಕ್ಕಮಗಳೂರು: ಶೃಂಗೇರಿಗೆ ಹೋಗುವ ಮಾರ್ಗ ಮಧ್ಯೆ ರಾಜ್ಯ ಹೆದ್ದಾರಿ ಬಿರುಕು ಬಿಟ್ಟಿದ್ದು, ವಾಹನ ಸವಾರರು ಹಾಗೂ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಬಳಿಯ ಇಟ್ಟಿಗೆ - ಸೀಗೋಡು ಎಂಬ ಗ್ರಾಮದಲ್ಲಿ ರಸ್ತೆಯ ಒಂದು ಬದಿಯಿಂದ ಮತ್ತೊಂದು ಬದಿಯವರೆಗೂ ಭೂಮಿ ಬಿರುಕು ಬಿಟ್ಟಿದ್ದು, ಜಯಪುರ, ಕೊಪ್ಪ, ಶೃಂಗೇರಿ ಸೇರಿದಂತೆ ಈ ಭಾಗದಲ್ಲಿ ಸಂಚರಿಸುವ ಜನರಲ್ಲಿ ಭಯ ಹುಟ್ಟಿಸಿದೆ. ಇಟ್ಟಿಗೆ-ಸೀಗೋಡು ಗ್ರಾಮದ ಶಿವನಗರದಲ್ಲಿ ವ್ಯಕ್ತಿಯೊಬ್ಬರು ಮನೆ ನಿರ್ಮಾಣಕ್ಕಾಗಿ ಬೋರ್‍ವೆಲ್ ಕೊರೆಸುವ ವೇಳೆ ರಸ್ತೆಯಲ್ಲಿ ಬಿರುಕು ಬಂದಿದೆ ಎಂಬ ಆರೋಪ ಕೇಳಿ ಬಂದಿದೆ. ಶೃಂಗೇರಿ ಸೇರಿದಂತೆ ಹತ್ತಾರು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಏಕೈಕ ಮಾರ್ಗ ಇದೇ ಆಗಿದೆ. ಒಂದು ವೇಳೆ ಈ ಮಾರ್ಗ ಬಂದ್ ಆದಲ್ಲಿ ಚಿಕ್ಕಮಗಳೂರು-ಕೊಪ್ಪ-ಶೃಂಗೇರಿ ಮಾರ್ಗವೂ ಬಂದ್ ಆಗಲಿದೆ. ಹತ್ತಾರು ಕಿ.ಮೀ. ಸುತ್ತಿಕೊಂಡು ಓಡಾಡಬೇಕಾದ ಸ್ಥಿತಿ ನಿರ್ಮಾಣವಾಗಲಿದೆ. ಕೂಡಲೇ ಸಂಬಂಧಪಟ್ಟ ಇಲಾಖೆ ಇತ್ತ ಗಮನ ಹರಿಸಿ ರಸ್ತೆ ಪರಿಶೀಲನೆ ನಡೆಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.