ಚಿಕ್ಕಮಗಳೂರು: ಆರು ವರ್ಷಗಳ ಹಿಂದೆ ಜಿಲ್ಲೆಯನ್ನು ಬೆಚ್ಚಿಬೀಳಿಸಿದ್ದ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಿದೆ. ಶೃಂಗೇರಿಯಲ್ಲಿ ಯುವತಿ ಮೇಲೆ ನಡೆದಿದ್ದ ಆ್ಯಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳಿಗೆ ಚಿಕ್ಕಮಗಳೂರಿನ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.
ಶೃಂಗೇರಿಯ ಮೆಣಸೆಯಲ್ಲಿ ಏ.18, 2015 ರಂದು ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ಯುವತಿ ಕೆಲಸ ಮುಗಿಸಿಕೊಂಡು ಬರುತ್ತಿದ್ದ ಸಮಯದಲ್ಲಿ ಆಕೆಯ ಮೇಲೆ ಆ್ಯಸಿಡ್ ದಾಳಿ ನಡೆದಿತ್ತು. ಅಪರಾಧಿ ಗಣೇಶ್ ಎಂಬುವನು ಯುವತಿಯನ್ನು ಮದುವೆಯಾಗುಂತೆ ಪೀಡಿಸುತ್ತಿದ್ದನು. ಆದರೆ ಯುವತಿ ಒಪ್ಪದ ಹಿನ್ನೆಲೆಯಲ್ಲಿ ಆಕೆಯ ಮೇಲೆ ಪೂರ್ವ ನಿಯೋಜಿತವಾಗಿ ಆ್ಯಸಿಡ್ ದಾಳಿ ಮಾಡಿರುವುದು ಎಂಬುದು ಸಾಬೀತಾಗಿದೆ.
ಓದಿ: ಪೋಷಕರ ಆಸ್ತಿ ಬೇಡ ಎಂದು ಮುಚ್ಚಳಿಕೆ : ಸುಖಾಂತ್ಯ ಕಂಡಿತು ಗದಗ PSI ಮಗಳ ಲವ್ ಸ್ಟೋರಿ!
ಕಳೆದ ಆರು ವರ್ಷಗಳಿಂದ ಸುದೀರ್ಘ ವಿಚಾರಣೆಯಲ್ಲಿದ್ದ ಪ್ರಕರಣಕ್ಕೆ ಇಂದು 2ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಹತ್ವದ ತೀರ್ಪು ನೀಡಿದ್ದು, ಅಪರಾಧಿಗಳಾದ ಗಣೇಶ್, ಕಬೀರ್, ವಿನೋದ್, ಅಬ್ದುಲ್ ಮಜೀದ್ ಎಂಬುವವರಿಗೆ ಜೀವಾವಧಿ ಶಿಕ್ಷೆ ಹಾಗೂ 20 ಲಕ್ಷ ರೂ. ದಂಡ ವಿಧಿಸಿದೆ.
ಚಿಕ್ಕಮಗಳೂರಿನ 2 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಂಜುನಾಥ ಸಂಗ್ರೇಶಿ ಈ ಮಹತ್ವದ ತೀರ್ಪು ನೀಡಿ ಆದೇಶ ಹೊರಡಿಸಿದ್ದಾರೆ.