ಚಿಕ್ಕಮಗಳೂರು: ನಗರದ ಐಡಿಎಸ್ಜಿ ಕಾಲೇಜು ಪಕ್ಕದಲ್ಲಿ ನಿರ್ಮಾಣವಾಗಿರುವ ಮಹಾಲಕ್ಷ್ಮಿ ದೇಗುಲದ ಉದ್ಘಾಟನೆ ಹಾಗೂ ಕುಂಬಾಭಿಷೇಕ ಕಾರ್ಯಕ್ರಮವನ್ನ ಶೃಂಗೇರಿ ಶಾರದಾ ಪೀಠದ ಕಿರಿಯ ಶ್ರೀ ವಿಧುಶೇಖರ ಭಾರತೀ ತೀರ್ಥ ಸ್ವಾಮೀಜಿ ನೆರವೇರಿಸಿದರು.
ಇದೇ ವೇಳೆ ಸ್ವಾಮೀಜಿಗಳು ಚಂದ್ರ ಮೌಳೇಶ್ವರ ಪೂಜಾ ಕಾರ್ಯಕ್ರಮದಲ್ಲೂ ಭಾಗವಹಿಸಿ ಭಕ್ತರಿಗೆ ಆಶೀರ್ವಚನ ನೀಡಿದರು. ಈ ಮಹಾಲಕ್ಷ್ಮಿ ದೇವಾಲಯ ನೂತನವಾಗಿ ನಿರ್ಮಾಣವಾಗಿದೆ. ಪ್ರಧಾನ ದೇವತೆ ಮಹಾಲಕ್ಷ್ಮಿ ಜೊತೆಗೆ ಅಮೃತ ಶಿಲೆಯ ಅಷ್ಟ ಲಕ್ಷ್ಮೀಯರಾದ ಆದಿಲಕ್ಷ್ಮಿ, ಸಂತಾನಲಕ್ಷ್ಮಿ,ಗಜಲಕ್ಷ್ಮಿ,ಧನಲಕ್ಷ್ಮಿ,ಭಾಗ್ಯಲಕ್ಷ್ಮಿ,ವೀರಲಕ್ಷ್ಮಿ,ವಿಜಯಲಕ್ಷ್ಮಿ, ಐಶ್ವರ್ಯ ಲಕ್ಷ್ಮಿ ವಿಗ್ರಹಗಳು ಈ ದೇವಾಲಯದಲ್ಲಿವೆ.
ದೇಗುಲದ ನಾಲ್ಕು ಉಪ ದಿಕ್ಕುಗಳಲ್ಲೂ ಶ್ರೀರಾಮ,ಆಂಜನೇಯ,ಗಣಪತಿ ದೇವಾಲಯಗಳ ಆವರಣವನ್ನ ನಿರ್ಮಾಣ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಶೃಂಗೇರಿಯ ಕಿರಿಯ ಶ್ರೀಗಳು ಭಾಗವಹಿಸಿರೋದಕ್ಕೆ ಭಕ್ತರಲ್ಲಿ ಹರ್ಷ ಮನೆ ಮಾಡಿದೆ. ಅವರನ್ನು ಚಿಕ್ಕಮಗಳೂರು ನಗರದಲ್ಲಿ ಭವ್ಯವಾಗಿ ಸ್ವಾಗತ ಮಾಡಲಾಯಿತು.