ಚಿಕ್ಕಮಗಳೂರು: ರಾಜ್ಯದಲ್ಲಿ ಬರಗಾಲ ಮತ್ತು ಸರಿಯಾಗಿ ಮಳೆ ಬಾರದ ಹಿನ್ನೆಲೆ ರಾಜ್ಯ ಸರ್ಕಾರದ ವತಿಯಿಂದ ನಾಳೆ ಶೃಂಗೇರಿಯ ಕಿಗ್ಗಾದಲ್ಲಿರುವ ಋಶ್ಯ ಶೃಂಗ ದೇವಸ್ಥಾನದಲ್ಲಿ ಸಚಿವ ಡಿ ಕೆ ಶಿವಕುಮಾರ್ ಹಾಗೂ ಮುಜರಾಯಿ ಸಚಿವ ಪರಮೇಶ್ವರ್ ನಾಯಕ್ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.
ನಾಳೆ ಪೂಜೆ ಇರುವ ಹಿನ್ನೆಲೆ ಶೃಂಗೇರಿಗೆ ಸಚಿವ ಡಿ ಕೆ ಶಿವಕುಮಾರ್ ಆಗಮಿಸಿದ್ದು, ಶಾರದಾಂಬೆಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಮಳೆಗಾಗಿ ಪ್ರಾರ್ಥನೆ ಮಾಡಿದರು. ನಂತರ ನರಸಿಂಹ ವನದಲ್ಲಿರುವ ಗುರು ನಿವಾಸಕ್ಕೆ ತೆರಳಿ ಗುರುಗಳ ಜೊತೆ ಕೆಲ ಕಾಲ ಸಮಾಲೋಚನೆ ನಡೆಸಿ ಆಶೀರ್ವಾದ ಪಡೆದರು.
ನಂತರ ಮಾಧ್ಯಮದವರ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಭೀಕರ ಬರ ಹಿನ್ನೆಲೆ ಉತ್ತಮ ಮಳೆ ಆಗಲಿ ಎಂದು ದೇವರಲ್ಲಿ ಪ್ರಾಥನೆ ಮಾಡಲು ಶೃಂಗೇರಿಗೆ ಬಂದಿದ್ದೇವೆ. ಭಕ್ತಿ ಇದ್ದಲ್ಲಿ ಭಗವಂತ, ಮನಸ್ಸಿದಲ್ಲಿ ಮಾರ್ಗ ಎಂಬಂತೆ ನಾವು ದೇವರ ಮೇಲೆ ನಂಬಿಕೆ ಇಟ್ಟಿದ್ದೇವೆ ಎಂದರು.
ನಾಳೆ ಬೆಳಗ್ಗೆ 5.30 ಕ್ಕೆ ಋಶ್ಯ ಶೃಂಗ ದೇವಸ್ಥಾನದಲ್ಲಿ ಶುಭ ಗಳಿಗೆ ಮತ್ತು ಶುಭ ನಕ್ಷತ್ರದಲ್ಲಿ ವಿಶೇಷ ಪೂಜೆ ಮಾಡುತ್ತಿದ್ದು, ಮಳೆಗಾಗಿ ಪ್ರಾರ್ಥನೆ ಮಾಡಲಾಗುವುದು. ಈ ಪೂಜೆಯಲ್ಲಿ ಮುಜರಾಯಿ ಸಚಿವ ಪರಮೇಶ್ವರ್ ನಾಯಕ್ ಕೂಡ ಭಾಗವಹಿಸಲಿದ್ದಾರೆ ಎಂದರು.
ರಾಜ್ಯದಲ್ಲಿ ಉತ್ತಮ ಮಳೆಯಾಗಲಿ ಎಂದು ರಾಜ್ಯ ಸರ್ಕಾರದ ವತಿಯಿಂದ ವಿವಿಧ ದೇವಸ್ಥಾನಗಲ್ಲಿ ಮಳೆಗಾಗಿ ಪೂಜೆ ಮಾಡಿಸಲಾಗುತ್ತಿದೆ. ರಾಜ್ಯದಲ್ಲಿ ಉತ್ತಮ ಮಳೆ ಆಗಲಿ ಎಂದು ಶ್ರೀಗಳು ಸಹ ಆಶೀರ್ವಾದ ಮಾಡಿದ್ದಾರೆ ಎಂದು ತಿಳಿಸಿದರು.