ಚಿಕ್ಕಮಗಳೂರು: ನಮ್ಮ ದೇಶಕ್ಕಾಗಿ ಹೋರಾಡಿ ಅನೇಕ ಮಂದಿ ಹುತಾತ್ಮರಾಗಿದ್ದಾರೆ. ದೇಶಕ್ಕಾಗಿ, ಭಾರತ ಮಾತೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ. ಜುಲೈ 26ರಂದು ಪ್ರತಿವರ್ಷ ಕಾರ್ಗಿಲ್ ವಿಜಯ್ ದಿವಸ್ ಎಂದು ಆಚರಣೆ ಮಾಡಲಾಗುತ್ತದೆ. ಈ ಕಾರ್ಗಿಲ್ ವಿಜಯ್ ದಿವಸ್ನಲ್ಲಿ ಹೋರಾಡಿದ ಚಿಕ್ಕಮಗಳೂರು ಜಿಲ್ಲೆಯ ವೀರ ಯೋಧ ಈಟಿವಿ ಭಾರತದೊಂದಿಗೆ ಯುದ್ದದ ಕೆಲವು ರೋಚಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
30 ವರ್ಷಗಳ ಕಾಲ ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸಿರುವ ಇವರ ಹೆಸರು ಕ್ಯಾಪ್ಟನ್ ಕೃಷ್ಣೇಗೌಡ. ಚಿಕ್ಕಮಗಳೂರಿನ ಇಂದಾವರ ನಿವಾಸಿ. ಸದ್ಯ ಜಯನಗರದಲ್ಲಿ ವಾಸ ಮಾಡುತ್ತಿರುವ ಇವರು, 1999ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದಂತಹ ಆಪರೇಷನ್ ವಿಜಯ್ ಹೆಸರಿನ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿ ಭಾರತಾಂಬೆಗೆ ವಿಜಯದ ಮಾಲೆ ಹಾಕಿದ್ದ ಲಕ್ಷಾಂತರ ಸೈನಿಕರಲ್ಲಿ ಒಬ್ಬರಾಗಿದ್ದರು. ಜಮ್ಮು ಕಾಶ್ಮೀರ, ಶ್ರೀನಗರ, ಈಸ್ಟರ್ನ್ ಕಮಾಂಡ್, ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ, ವಿವಿಧ ಭಾಗಗಳಲ್ಲಿ ಹಾಗೂ ದೇಶದ ಹಲವಾರು ಗಡಿ ಭಾಗಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಯುದ್ಧದಲ್ಲಿ ಭಾಗವಹಿಸಿದ ನೆನಪಿಗಾಗಿ ಭಾರತೀಯ ಸೈನ್ಯದಿಂದ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ಈ ಕುರಿತು ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿರುವ ಅವರು, ಇಂದು ಕೂಡ ಸೇವೆಗೆ ಕರೆದರೆ ನಾನು ಹೋಗಲು ರೆಡಿ ಇದ್ದೇನೆ. ಕಾರ್ಗಿಲ್ ಯುದ್ದದಲ್ಲಿ ಭಾಗವಹಿಸಿರುವುದು ಹೆಮ್ಮೆಯ ವಿಚಾರ. ಈ ಯುದ್ದದಲ್ಲಿ ನನ್ನ ಅನೇಕ ಸ್ನೇಹಿತರನ್ನು ಕಳೆದುಕೊಂಡಿದ್ದೇನೆ ಎಂದರು.