ಚಿಕ್ಕಮಗಳೂರು : ಜಿಲ್ಲೆಯಲ್ಲಿ ಇಂದು ಜಿಲ್ಲಾ ಸಹಕಾರ ಬ್ಯಾಂಕ್ಗಳ ಚುನಾವಣೆ ನಡೆಯುತ್ತಿದೆ. ಜಿಲ್ಲಾ ಸಹಕಾರ ಬ್ಯಾಂಕಿನ ಗದ್ದುಗೆ ಹಿಡಿಯಲು ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ನಡುವೆ ಭರ್ಜರಿ ಹಣಾಹಣಿ ಏರ್ಪಟ್ಟಿದೆ. ಈ ಕುರಿತು ಮಾತನಾಡಿದ ವಿಧಾನ ಪರಿಷತ್‌ನ ಉಪ ಸಭಾಪತಿ ಎಸ್ ಎಲ್ ಧರ್ಮೇಗೌಡ, ಬಿಜೆಪಿ ಪಕ್ಷದಿಂದ ಪ್ರಜಾಪ್ರಭುತ್ವ ವ್ಯವಸ್ಥೆಯ ಕಗ್ಗೊಲೆ ಆಗುತ್ತಿದೆ ಎಂದು ಆರೋಪಿಸಿದ್ದಾರೆ.
ಈ ದಿನ ಚುನಾವಣೆ ನಡೆದಿದೆ. ಚಿಕ್ಕಮಗಳೂರು ತಾಲೂಕಿನಲ್ಲಿ 29 ಜನ ಅರ್ಹ ಮತದಾರರಿದ್ದಾರೆ. ಆದರೆ, ಒಂದೇ ಬಾರಿಗೆ 10 ಜನರನ್ನು ಚುನಾವಣೆ ಮತದಾನದಿಂದ ಅನರ್ಹ ಮಾಡಿದ್ದಾರೆ. ಇದು ಯಾವ ರೀತಿಯ ಕಾನೂನು ಎಂಬುದು ನಮಗೆ ಅರ್ಥವಾಗುತ್ತಿಲ್ಲ.
ಕೊಪ್ಪ ತಾಲೂಕಿನಲ್ಲಿಯೂ 13 ಜನ ಮತದಾರರಿದ್ದಾರೆ. ಅದರಲ್ಲಿ ಇಬ್ಬರನ್ನು ಅನರ್ಹ ಮಾಡಲಾಗಿದೆ. ಬಿಜೆಪಿಯವರು ಚುನಾವಣೆಯಲ್ಲಿ ಸೋಲುತ್ತೇವೆ ಎಂಬ ಭೀತಿಯಿಂದ, ಈ ರೀತಿಯ ಹುನ್ನಾರ ನಡೆಸಿದ್ದಾರೆ. ಇಲ್ಲಿ ಮುಕ್ತ ಚುನಾವಣೆ ನಡೆಯಲು ಅವರು ಅವಕಾಶ ಮಾಡಿಕೊಡುತ್ತಿಲ್ಲ.
ಇದರಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಹಸ್ತಕ್ಷೇಪ ಕಾಣಿಸುತ್ತಿದೆ. ಇದರಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯಲ್ಲ. ಕಳೆದ 15 ದಿನಗಳ ಹಿಂದೆ ನೀವೆಲ್ಲ ಅರ್ಹ ಮತದಾರರು ಎಂದು ಸರ್ಟಿಫಿಕೇಟ್ ಕೂಡ ನೀಡಿದ್ದಾರೆ. ಆದರೆ, ಇಂದು ಅನರ್ಹರು ಎಂದು ಹೇಳುತ್ತಿದ್ದಾರೆ. ಅನರ್ಹರು ಎಂದು ಕಳೆದ 15 ದಿನಗಳ ಹಿಂದೆಯೇ ಅಧಿಕಾರಿಗಳು ಹೇಳಬಹುದಿತ್ತು. ಅಥವಾ ನಾವು ದಾಖಲಾತಿಗಳನ್ನು ನೀಡಿದ ದಿನವೇ ಹೇಳಬಹುದಾಗಿತ್ತು.
ಈ ರೀತಿಯ ಬೆಳವಣಿಗೆಗಳು ಯಾವತ್ತೂ ಜಿಲ್ಲೆಯಲ್ಲಿ ನಡೆದಿರಲಿಲ್ಲ ಎಂದು ಚಿಕ್ಕಮಗಳೂರಿನಲ್ಲಿ ವಿಧಾನ ಪರಿಷತ್ತಿನ ಉಪಸಭಾಪತಿ ಎಸ್ ಎಲ್ ಧರ್ಮೇಗೌಡ ಹೇಳಿದರು.