ಚಿಕ್ಕಮಗಳೂರು: ಇಂದಿನಿಂದ ಪ್ರಾರಂಭವಾಗಿರುವ ಎಸ್ಎಸ್ಎಲ್ಸಿ ಪರೀಕ್ಷೆಗೆ ಜಿಲ್ಲೆಯಲ್ಲಿ ಒಟ್ಟು 58 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು, 13,924 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ.
ಪ್ರತಿಯೊಂದು ಕೊಠಡಿಯಲ್ಲಿ 18 ವಿದ್ಯಾರ್ಥಿಗಳು ಸಾಮಾಜಿಕ ಅಂತರದೊಂದಿಗೆ ಪರೀಕ್ಷೆ ಬರೆಯುತ್ತಿದ್ದಾರೆ. ಜಿಲ್ಲೆಯಲ್ಲಿರುವ ಅಂಧ ಮಕ್ಕಳು ಹಾಗೂ ವಿಶೇಷ ಚೇತನ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನಗರದ ಹೊರವಲಯದಲ್ಲಿರುವ ಮೌಂಟನ್ ವ್ಯೂ ಪ್ರೌಢಶಾಲೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. 17 ಅಂಧ ವಿದ್ಯಾರ್ಥಿಗಳು 7 ವಿಶೇಷ ಚೇತನ ಮಕ್ಕಳು, ಈ ಶಾಲೆಯಲ್ಲಿ ಇಂದು ಪರೀಕ್ಷೆ ಬರೆಯುತ್ತಿದ್ದಾರೆ. ಇವರಿಗೆ ಪರೀಕ್ಷೆ ಬರೆಯಲು ಯಾವುದೇ ರೀತಿಯ ತೊಂದರೆ ಆಗದಂತೆ, ಜಿಲ್ಲಾಡಳಿತ ಕಾಳಜಿ ವಹಿಸಿದೆ. ಪರೀಕ್ಷೆ ಕೊಠಡಿಗೆ ತೆರಳುವ ಮುನ್ನ ಎಲ್ಲರಿಗೂ ಆರೋಗ್ಯ ತಪಾಸಣೆ, ಸ್ಕ್ರೀನಿಂಗ್, ಸಾಮಾಜಿಕ ಅಂತರ, ಸೇರಿದಂತೆ ಎಲ್ಲಾ ನಿಯಮಗಳನ್ನು ಪಾಲಿಸಿ, ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿಕೊಡಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ 7 ಸೀಲ್ಡೌನ್ ಪ್ರದೇಶಗಳ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿದೆ. ಮತ್ತೊಂದೆಡೆ ಮೂಡಿಗೆರೆ ನಗರದಲ್ಲಿರುವ ಜ್ಯೂನಿಯರ್ ಕಾಲೇಜಿನಲ್ಲಿ ಹಾಲ್ ಟಿಕೆಟ್ ಸಿಕ್ಕಿಲ್ಲ ಎಂದು ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟಾಗಿತ್ತು. ಸ್ಥಳಕ್ಕಾಗಮಿಸಿದ ಶಿಕ್ಷಕರು ತಕ್ಷಣ ಈ ಗೊಂದಲ ಬಗೆಹರಿಸಿದರು.
ಕೊಪ್ಪ ತಾಲೂಕಿನಿಂದ ಪರೀಕ್ಷೆ ಬರೆಯಲು ಬಂದಿದ್ದ, ವಿಶೇಷ ಚೇತನ ವಿದ್ಯಾರ್ಥಿ ಆನಂದ್ ಬಸವನಹಳ್ಳಿ ಪರೀಕ್ಷಾ ಕೇಂದ್ರಕ್ಕೆ ಬಂದಾಗ ಅಲ್ಲಿನ ಸಿಬ್ಬಂದಿ ಆತನನ್ನು ಕಾರಿನಿಂದ ಇಳಿಸಿ ಪರೀಕ್ಷೆ ಬರೆಯಲು ಸುರಕ್ಷಿತವಾಗಿ ಆತನ ಕೈ ಹಿಡಿದುಕೊಂಡು ಪರೀಕ್ಷಾ ಕೊಠಡಿಗೆ ಕರೆದುಕೊಂಡು ಹೋಗಿದ್ದು ವಿಶೇಷವಾಗಿತ್ತು.