ಚಿಕ್ಕಮಗಳೂರು: ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ಜಿಲ್ಲೆಯ ತರೀಕೆರೆ ತಾಲೂಕಿನ ಸಂಜನಾ ಅವರು, ಲಾಕ್‌ಡೌನ್ ವೇಳೆ 18 ದೇಶಗಳ ರಾಜತಾಂತ್ರಿಕ ಅಧಿಕಾರಿಗಳು ನಡೆಸಿದ ಸಂದರ್ಶನದಲ್ಲಿ ಭಾಗವಹಿಸಿ ಅದರಲ್ಲಿ ಯಶಸ್ವಿಯಾಗಿದ್ದಾರೆ. ಅಂತಾರಾಷ್ಟ್ರೀಯ ಅಣುಶಕ್ತಿ ಏಜೆನ್ಸಿಯಲ್ಲಿ ಹಿರಿಯ ಎಂಜಿನಿಯರ್ ಹುದ್ದೆಗೆ ಅವರು ಆಯ್ಕೆಯಾಗಿದ್ದಾರೆ.
ತರೀಕೆರೆ ನಗರದ ಜವಳಿ ವ್ಯಾಪಾರಿ ಜಗನ್ನಾಥ್ ರಾವ್ ಮತ್ತು ಸವಿತಾ ದಂಪತಿ ಪುತ್ರಿಯಾದ ಸಂಜನಾ ಮಹಳತ್ಕರ್ ಅವರು, ತಮ್ಮ ಪ್ರೌಢಶಿಕ್ಷಣ ಮತ್ತು ಪಿಯುಸಿ ವ್ಯಾಸಂಗವನ್ನು ತರೀಕೆರೆ ನಗರದ ಸರ್ಕಾರಿ ಬಾಲಕಿಯರ ಕಾಲೇಜಿನಲ್ಲಿ ಮಾಡಿದ್ದಾರೆ. ಶಿವಮೊಗ್ಗದ ಜವಾಹರಲಾಲ್ ನೆಹರೂ ನ್ಯಾಷನಲ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯೂನಿಕೇಷನ್ ವಿಷಯದಲ್ಲಿ ಪದವಿ ಪಡೆದಿದ್ದಾರೆ. ಬಳಿಕ ಹೈದರಾಬಾದ್‌ನಲ್ಲಿರುವ ಟಾಟಾ ಕನ್ಸಲ್ಟ್‌ಟೆಂಟ್ ಸರ್ವೀಸ್‌ನಲ್ಲಿ ಉದ್ಯೋಗಕ್ಕೆ ಸೇರಿಕೊಂಡಿದ್ದರು.
ಸಂಜನಾ ಅವರು ಕೆಲಸದ ನಡುವೆಯೇ ಅಂತಾರಾಷ್ಟ್ರೀಯ ನಾಗರಿಕ ಸೇವಾ ಪರೀಕ್ಷೆ ಎದುರಿಸಿ ಎಂಜಿನಿಯರ್ ಆಗಿ ಸೇವೆ ಸಲ್ಲಿಸಲು ಆಯ್ಕೆ ಆಗಿದ್ದಾರೆ.
ಆಸ್ಟ್ರಿಯಾದ ವಿಯೆನ್ನಾದಲ್ಲಿರುವ ವಿಶ್ವಸಂಸ್ಥೆಯ ಇಂಟರ್ನ್ಯಾಷನಲ್ ಅಟಾಮಿಕ್ ಎನರ್ಜಿ ಏಜೆನ್ಸಿ ಕಚೇರಿಯಲ್ಲಿ ಹಿರಿಯ ಎಂಜಿನಿಯರ್ ಆಗಿ ಸೇವೆ ಸಲ್ಲಿಸಲು ಸೆಪ್ಟೆಂಬರ್ ತಿಂಗಳಾಂತ್ಯಕ್ಕೆ ಸಂಜನಾ ಪ್ರಯಾಣ ಬೆಳೆಸಲಿದ್ದಾರೆ.