ಚಿಕ್ಕಮಗಳೂರು: ಕರ್ನಾಟಕ ರಾಜ್ಯದಲ್ಲಿ ಹಾಗೂ ದೇಶದಲ್ಲೇ ಹೆಚ್ಚು ಬಾರಿ ವಿಧಾನ ಪರಿಷತ್ ಸದಸ್ಯರಾಗಿರೋ ಬಸವರಾಜ್ ಹೊರಟ್ಟಿಯವರು ಅವರ ಹಿರಿತನದ ಆಧಾರದ ಮೇಲೆ ಮೈತ್ರಿ ಸರ್ಕಾರದ ಕುರಿತು ನೀಡಿರುವ ಹೇಳಿಕೆ ಜವಾಬ್ದಾರಿಯುತವಾದದ್ದು. ಹಾಗಾಗಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಹೊರಟ್ಟಿಯವರ ಸಲಹೆಯನ್ನು ಸ್ವೀಕರಿಸೋದು ಒಳ್ಳೆಯದು ಎಂದು ಮಾಜಿ ಸಚಿವ ಡಿ.ಎನ್.ಜೀವರಾಜ್ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಕಿವಿಮಾತು ಹೇಳಿದ್ದಾರೆ.
ಜಿಲ್ಲೆಯ ಬಾಳೆಹೊನ್ನೂರಿನಲ್ಲಿ ಮಾತನಾಡಿದ ಅವರು, ಹೊರಟ್ಟಿಯವರು ತಮ್ಮ ಹಿರಿತನ ಹಾಗೂ ಅನುಭವದ ಆಧಾರದ ಮೇಲೆ ಸರ್ಕಾರವನ್ನು ವಿಸರ್ಜಿಸಿ ಚುನಾವಣೆಗೆ ಹೋಗೋದು ಒಳ್ಳೆಯದು ಎಂದಿದ್ದಾರೆ. ಏಕೆಂದರೆ ಇಲ್ಲಿ ಅನ್ಯಾಯವಾಗುತ್ತಿರೋದು ಜೆಡಿಎಸ್ ಹಾಗೂ ಕಾಂಗ್ರೆಸ್ಗೆ ಅಲ್ಲ. ಅಭಿವೃದ್ಧಿ ಶೂನ್ಯ ಹಾಗೂ ದ್ವೇಷದ ಸರ್ಕಾರದಿಂದ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ. ಹಾಗಾಗಿ, ಹೊರಟ್ಟಿಯವರ ಹೇಳಿಕೆ ಸರಿಯಾಗಿದೆ. ಅವರ ಅನುಭವದ ಮಾತನ್ನ ಸ್ವಾಗತಿಸುತ್ತೇನೆ ಎಂದು ಬಾಳೆಹೊನ್ನೂರಿನಲ್ಲಿ ಡಿ.ಎನ್.ಜೀವರಾಜ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.