ಚಿಕ್ಕಮಗಳೂರು: ಬೇಟೆಗಾಗಿ ಕಾದು ಕುಳಿತಿದ್ದ ಬರೊಬ್ಬರಿ 14 ಅಡಿ ಉದ್ದದ ಬೃಹತ್ ಗಾತ್ರದ ಹೆಬ್ಬಾವನ್ನು ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಕಳಸ ಸಮೀಪದ ಮುಜೆಖಾನ್ ಗ್ರಾಮದ ಕಾಫಿ ತೋಟದಲ್ಲಿ ಸೆರೆ ಹಿಡಿಯಲಾಗಿದೆ.
ಚಂದ್ರಶೇಖರ್ ಭಟ್ಟ ಎಂಬವರಿಗೆ ಸೇರಿದ ತೋಟದಲ್ಲಿ ಕಾಫಿ ಸೊಪ್ಪನ್ನು ಕತ್ತರಿಸುವಾಗ ಕಾರ್ಮಿಕರ ಕಣ್ಣಿಗೆ ಈ ಹೆಬ್ಬಾವು ತರಗಲೆಗಳ ಕಸದಲ್ಲಿ ಕಾಣಿಸಿದೆ. ತಲೆ ಮಾತ್ರ ಹೊರ ಹಾಕಿ ಆಹಾರಕ್ಕಾಗಿ ಹೊಂಚು ಹಾಕುತ್ತಿದ್ದನ್ನು ಕಂಡ ಕಾರ್ಮಿಕರು ಬೆಚ್ಚಿಬಿದ್ದರು. ಸ್ವಲ್ಪದರಲ್ಲೇ ಆ ಹಾವಿನ ಬಾಯಿಂದ ಬಚಾವಾದೆವು ಎಂದು ಕಾರ್ಮಿಕರು ಹೇಳುತ್ತಾರೆ.
ನಂತರ ತೋಟದ ಮಾಲೀಕ ಅರಣ್ಯ ಇಲಾಖೆಯ ಸಿಬ್ಬಂದಿಗೆ ಈ ವಿಚಾರ ತಿಳಿಸಿದರು. ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ಅರಣ್ಯ ಸಿಬ್ಬಂದಿ, ಉರಗ ತಜ್ಞ ರಿಜ್ವಾನ್ ಅವರಿಗೆ ಕರೆ ಮಾಡಿ ಅಲ್ಲಿಗೆ ಕರೆಸಿಕೊಂಡರು. ಕಾರ್ಯಾಚರಣೆ ನಡೆಸಿ ಬೃಹತ್ ಗಾತ್ರದ ಹೆಬ್ಬಾವನ್ನು ರಿಜ್ವಾನ್ ಸೆರೆ ಹಿಡಿದು, ಕುದುರೆಮುಖ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.