ಚಿಕ್ಕಮಗಳೂರು: ಹೈದ್ರಾಬಾದ್ನಲ್ಲಿ ಪಶುವೈದ್ಯೆ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಬರ್ಬರ ಹತ್ಯೆಯನ್ನು ಖಂಡಿಸಿ, ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಜನ ಸಂಸ್ಕೃತಿ ವೇದಿಕೆಯವರಿಂದ ಪ್ರತಿಭಟನೆ ಮಾಡಲಾಯಿತು.
ಪಶುವೈದ್ಯೆಯ ಬೈಕ್ ಪಂಕ್ಚರ್ ಹಾಕಿಸಿಕೊಡುವ ನೆಪದಲ್ಲಿ ನಾಲ್ಕು ಜನ ಆರೋಪಿಗಳು ಸಾಮೂಹಿಕ ಅತ್ಯಾಚಾರ ಮಾಡಿ, ಪೆಟ್ರೋಲ್ ಹಾಕಿ ಸುಟ್ಟು ಹಾಕಿರೋದು ಸಮಸ್ತ ನಾಗರಿಕರು ತಲೆತಗ್ಗಿಸುವಂತಹ ಕೆಲಸ. ಸಂತ್ರಸ್ಥೆಯ ಕುಟುಂಬಕ್ಕೆ ಧೈರ್ಯ ತುಂಬುವ ಕೆಲಸವನ್ನು ಸಮಸ್ತ ಭಾರತೀಯರು ಮಾಡಬೇಕಾಗಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವುದು ನ್ಯಾಯಾಂಗದ ಕೆಲಸ ಎಂದು ಪ್ರತಿಭಟನಾಕಾರರು ತಿಳಿಸಿದರು.
ಅಲ್ಲಿನ ಸರ್ಕಾರ, ಆರೋಪಿಗಳು ಯಾವುದೇ ಕಾರಣಕ್ಕೂ ಸಾಕ್ಷ್ಯಾಧಾರದ ಕೊರತೆಯಿಂದ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಬೇಕು. ಅತ್ಯಾಚಾರ ಮಾಡುವ ಆರೋಪಿಗಳಿಗೆ ಮರಣ ದಂಡನೆ ವಿಧಿಸಬೇಕು ಎಂದು ಆಗ್ರಹಿಸಿದರು.