ಚಿಕ್ಕಮಗಳೂರು: ಶೃಂಗೇರಿಯ ಶಾರದಾ ಪೀಠಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆಗಮಿಸಿದ್ದು, ಶಾರದಾಂಬೆಯ ದರ್ಶನ ಪಡೆದರು. ಈ ಹಿನ್ನೆಲೆಯಲ್ಲಿ ಪೊಲೀಸರ್ ಹೈ ಅಲರ್ಟ್ ಆಗಿದ್ದು, ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಎನ್‌ಎಸ್‌ಜಿ ತಂಡದೊಂದಿಗೆ 800 ರಿಂದ 1,000 ಪೊಲೀಸರ ನಿಯೋಜನೆ ಮಾಡಲಾಗಿದೆ.
ರಾಜ್ಯ ಹಾಗೂ ಕೇಂದ್ರ ಗುಪ್ತಚರ ಪೊಲೀಸರು ಎರಡು ದಿನದಿಂದ ಶೃಂಗೇರಿಯಲ್ಲಿ ಬೀಡುಬಿಟ್ಟು ಬಂದೋಬಸ್ತ್ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.
ಪಟ್ಟಣದಲ್ಲಿ ಅಂಗಡಿ-ಮುಂಗಟ್ಟುಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ರಾಷ್ಟ್ರಪತಿ ಸಂಚರಿಸುವ ಮಾರ್ಗದಲ್ಲಿ 30 ಅಡಿಗೊಬ್ಬ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಿದ್ದು, ಪಟ್ಟಣದ ಮೆಣಸೆ ಹಾಗೂ ಗಾಂಧಿ ಮೈದಾನದಲ್ಲಿ ಎರಡು ಹೆಲಿಪ್ಯಾಡ್ ನಿರ್ಮಾಣ ಮಾಡಲಾಗಿದೆ.
ಕುಟುಂಬಸಮೇತರಾಗಿ ಶೃಂಗೇರಿಗೆ ಬಂದಿರುವ ಕೋವಿಂದ್, ನವರಾತ್ರಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಇದ್ದರು.
ಇದಕ್ಕೂ ಮುನ್ನ ಶಾರದಾಂಬಾ ದೇವಾಲಯಕ್ಕೆ ರಾಷ್ಟ್ರಪತಿಗಳು ಆಗಮಿಸುತ್ತಿದ್ದಂತೆ ಶ್ರೀಮಠದ ವತಿಯಿಂದ ಪೂರ್ಣಕುಂಭ ಸ್ವಾಗತ ಕೋರಲಾಗಿತ್ತು. ಮಧ್ಯಾಹ್ನ 3.30ರ ನಂತರ ರಾಷ್ಟ್ರಪತಿಗಳು ದೆಹಲಿಗೆ ವಾಪಸ್ ಆಗಲಿದ್ದಾರೆ.