ಚಿಕ್ಕಮಗಳೂರು: ಕಾಂಗ್ರೆಸ್ ಗ್ಯಾರಂಟಿಗಳಲ್ಲಿ ಒಂದಾಗಿರುವ ಗೃಹಜ್ಯೋತಿ ಯೋಜನೆ ಇಂದಿನಿಂದ ಆರಂಭವಾಗಿದೆ. ಈಗಾಗಲೇ 86.5 ಲಕ್ಷ ಮಂದಿ ಅರ್ಜಿ ಹಾಕಿರುವುದಾಗಿ ಇಂಧನ ಸಚಿವ ಕೆ.ಜೆ ಜಾರ್ಜ್ ತಿಳಿಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಗೃಹಜ್ಯೋತಿ ಯೋಜನೆ ಚೆನ್ನಾಗಿ ಆಗಲಿದೆ ಎಂದಿದ್ದಾರೆ.
"ಜುಲೈ 1ರಿಂದ ಎಲ್ಲರಿಗೂ ಫ್ರೀ ಕರೆಂಟ್. ಈ ತಿಂಗಳು ಕೊನೆಗೆ ಎಲ್ಲರಿಗೂ ಬಿಲ್ ಬರುತ್ತೆ. ಜೂನ್ ತಿಂಗಳಿನದ್ದು ಜುಲೈಗೆ ಬರಲಿದೆ. ಈಗಾಗಲೇ ಅರ್ಜಿ ಹಾಕಿದವರಿಗೆ ಅಗಸ್ಟ್ 1ರಿಂದ ಬಿಲ್ ಕಟ್ಟಲು ಇರುವುದಿಲ್ಲ. ಉಚಿತ ಕರೆಂಟ್ ಸಿಗಲಿದೆ. ಗೃಹಜ್ಯೋತಿಗೆ ಅರ್ಜಿ ಹಾಕದವರು ಆದಷ್ಟು ಬೇಗನೆ ಹಾಕಿ. ನಂತರ ಅದನ್ನು ಕೆಇಬಿ ಆಫೀಸ್ಗೆ ಹೋಗಿ ಕೊಡಬೇಕು. ಈಗ ಅಷ್ಟು ಸಮಸ್ಯೆ ಇಲ್ಲ. ಪ್ರೆಷರ್ ಕೂಡ ಕಡಿಮೆಯಾಗಿದೆ" ಎಂದು ತಿಳಿಸಿದರು.
"ಅರ್ಜಿ ಹಾಕಲು ಇಷ್ಟೇ ಸಮಯ ಅಂತೇನಿಲ್ಲ. ಹಾಗಂತ ಹಾಕದೇ ಇದ್ರೆ ಫ್ರೀ ಕರೆಂಟ್ ಸಿಗಲ್ಲ. ಅರ್ಜಿ ಹಾಕೋದು ಲೇಟ್ ಮಾಡಿದ್ರೆ, ಸೌಲಭ್ಯ ಸಿಗೋದು ಲೇಟ್ ಆಗುತ್ತೆ. ಆದಷ್ಟು ಬೇಗ ಅರ್ಜಿ ಹಾಕುವುದು ಒಳ್ಳೆಯದು. ಇದರಿಂದ ಜನರಿಗೆಯೇ ಲಾಭ ಜುಲೈ 25 ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಇದೆ" ಎಂದರು.
ಇದನ್ನೂ ಓದಿ: Congress Guarantee: ಗೃಹಜ್ಯೋತಿ ಯೋಜನೆ ಆರಂಭ ಘೋಷಿಸಿದ ಸಿಎಂ: ಮಹಾರಾಷ್ಟ್ರ ದುರಂತಕ್ಕೆ ತೀವ್ರ ಆತಂಕ
ಗೃಹಜ್ಯೋತಿ ನೊಂದಣಿ ಪ್ರಕ್ರಿಯೆ: ಗೃಹಜ್ಯೋತಿ ನೋಂದಣಿ ಪ್ರಕ್ರಿಯೆ ಸರಳೀಕರಣವಾಗಿದ್ದು, ಗ್ರಾಹಕರು ಯಾವುದೇ ದಾಖಲೆಗಳನ್ನು ನೀಡಬೇಕಾಗಿಲ್ಲ. ವಿದ್ಯುತ್ ಸಂಖ್ಯೆಯಲ್ಲಿರುವ ಖಾತೆ ಸಂಖ್ಯೆ, ಗ್ರಾಹಕರ ಆಧಾರ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆಯನ್ನಷ್ಟೇ ನಮೂದಿಸಿದರೆ ಸಾಕು. ನೋಂದಣಿ ಪ್ರಕ್ರಿಯೆ ರಾಜ್ಯದ ಎಲ್ಲ ಕರ್ನಾಟಕ ಒನ್, ಗ್ರಾಮ ಒನ್ ಹಾಗೂ ಬೆಂಗಳೂರು ಒನ್ ಕೇಂದ್ರಗಳಲ್ಲಿ ನಡೆಯುತ್ತಿದೆ.
ಸೇವಾ ಸಿಂಧು ಪೋರ್ಟಲ್ https://sevasindhugs.karnataka.gov.in ಮೂಲಕ ನೋಂದಣಿ ಮಾಡಲಾಗುತ್ತಿದೆ. ನೋಂದಣಿ ಪ್ರಕ್ರಿಯೆಗೆ ಯಾವುದೇ ಗಡುವು ನಿಗದಿಪಡಿಸಲಾಗಿಲ್ಲ. ಯಾವಾಗ ಬೇಕಾದರೂ ಅರ್ಜಿ ಸಲ್ಲಿಸಬಹುದು. ಆದರೆ ಇದೇ ತಿಂಗಳಿನಿಂದ ಉಚಿತ ಕರೆಂಟ್ ಬೇಕಿದ್ದಲ್ಲಿ ಜುಲೈ 25ರ ಒಳಗಾಗಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದವರಿಗೆ ಮಾತ್ರ ಫ್ರೀ ಕರೆಂಟ್ ಸಿಗಲಿದೆ.
ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಕೆಲವೊಂದು ಷರತ್ತುಗಳನ್ನು ಸರ್ಕಾರ ನೀಡಿದೆ. ಈ ಯೋಜನೆಯನ್ನು ಎಲ್ಲರಿಗೂ ನೀಡಲಾಗುವುದಿಲ್ಲ. 200 ಯೂನಿಟ್ ವಿದ್ಯುತ್ ಬಳಕೆಯನ್ನು ಮೀರಿದ್ದಲ್ಲಿ ಅಂತಹವರಿಗೆ ಅನ್ವಯಿಸುವುದಿಲ್ಲ. ಅಲ್ಲದೇ ಯೋಜನೆಗೆ ಅರ್ಜಿ ಹಾಕಿದ ಬಳಿಕ 200 ಯೂನಿಟ್ಗಳ ಬಳಕೆಯ ಮಿತಿಯನ್ನು ಯಾವುದಾದರೂ ತಿಂಗಳಲ್ಲಿ ಮೀರಿದಲ್ಲಿ, ಆ ತಿಂಗಳ ಪೂರ್ಣ ವಿದ್ಯುತ್ ಬಿಲ್ ಪಾವತಿಸಿ, ಯೋಜನೆಯಲ್ಲಿ ಮುಂದುವರಿಯಬಹುದು.
ಹೊಸ ಸಂಪರ್ಕ ಪಡೆದ ಗ್ರಾಹಕರಿಗೆ ಬಳಕೆ ಇತಿಹಾಸ ಇಲ್ಲದಿರುವುದರಿಂದ ರಾಜ್ಯದ ಗೃಹ ಬಳಕೆದಾರರು ಸರಾಸರಿ ಬಳಕೆಯ ಮಾಸಿಕ 53 ಯೂನಿಟ್‌ಗಳಾಗಿರುವುದರಿಂದ 53 ಯೂನಿಟ್‌ಗಳನ್ನೇ ನಿರ್ಧರಿಸಿ ಈ ಯೋಜನೆ ಸೌಲಭ್ಯ ಲಭಿಸಲಿದೆ. Multi Stored Apartment ಗಳಲ್ಲಿ ಯಾವ ಮನೆಗಳಿಗೆ ಪ್ರತ್ಯೇಕ ಮೀಟರ್ ಇದೆಯೋ ಹಾಗೂ ಮೀಟರ್ ರೀಡಿಂಗ್ ಮಾಡಲಾಗುತ್ತಿದೆಯೋ ಅಂತಹ ಎಲ್ಲ ಮನೆಗಳಿಗೆ ಈ ಯೋಜನೆ ಅನ್ವಯಿಸಲಿದೆ.
ಇದನ್ನೂ ಓದಿ: ಬಾಡಿಗೆದಾರರಿಗೂ ಗೃಹಜ್ಯೋತಿ ಉಚಿತ ವಿದ್ಯುತ್.. ತೆರಿಗೆ ಪಾವತಿದಾರರಿಗಿಲ್ಲ ಗೃಹ ಲಕ್ಷ್ಮಿ ಯೋಜನೆ