ಚಿಕ್ಕಮಗಳೂರು: ಅಪಘಾತದಿಂದ ತಪ್ಪಿಸಿಕೊಳ್ಳಲು ಹೆಲ್ಮೆಟ್ ಧರಿಸುವುದಕ್ಕಿಂತಲು, ಪೊಲೀಸರಿಂದ ತಪ್ಪಿಸಿಕೊಳ್ಳಲೆಂದು ಧರಿಸುವವರೇ ಹೆಚ್ಚಾಗಿದ್ದಾರೆ. ಇಂತಹ ವಾಹನ ಸವಾರರಿಗೆ ಕಾಫಿನಾಡು ಚಿಕ್ಕಮಗಳೂರು ನಗರದಲ್ಲಿ ಪೊಲೀಸರು ಜಾಗೃತಿ ಪಾಠ ಹೇಳಿದ್ದಾರೆ.
ಹಾಫ್ ಹೆಲ್ಮೆಟ್ ಹಾಕಿ ವಾಹನ ಚಲಾಯಿಸುತ್ತಿದ್ದ ಸವಾರರನ್ನು ತಡೆದು ಹೆಲ್ಮೆಟ್ ವಶಕ್ಕೆ ಪಡೆದು ಪೊಲೀಸರು ಜಾಗೃತಿ ಮೂಡಿಸಿದ್ದಾರೆ. ಅಲ್ಲದೇ ವಾಹನ ಸವಾರರಿಗೆ ಹಾಫ್ ಹೆಲ್ಮೇಟ್ ಧರಿಸದಂತೆ ಹೇಳಿ ಈ ಬಾರಿ ದಂಡ ಹಾಕಲ್ಲ, ಹಾಗೇ ಬಿಟ್ಟು ಕಳಿಸಲಾಗುತ್ತದೆ ಎಂದು ಬೈಕ್ ಸವಾರರಿಗೆ ಎಚ್ಚರಿಕೆ ನೀಡಿ ಹಾಫ್ ಹೆಲ್ಮೆಟ್ ವಶಕ್ಕೆ ಪಡೆದಿದ್ದಾರೆ. ತಲೆ, ಕಿವಿ, ಮುಖ ಕವರ್ ಆಗುವಂತಹ ಫುಲ್ ಹೆಲ್ಮೆಟ್ ಹಾಕಬೇಕು ಎಂದು ಸವಾರರಿಗೆ ಸೂಚನೆ ನೀಡಿದರು.
ನಗರದ ವಿವಿಧ ವೃತ್ತಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು ಸುಮಾರು ಒಂದು ಸಾವಿರಕ್ಕೂ ಹೆಚ್ಚು ಹೆಲ್ಮೆಟ್ಗಳನ್ನು ವಶಕ್ಕೆ ಪಡೆದುಕೊಂಡು ಸವಾರರಿಗೆ ಐಎಸ್ಐ ಮಾರ್ಕ್ ಇರುವಂತಹ ಉತ್ತಮ ಗುಣಮಟ್ಟದ ಹೆಲ್ಮೆಟ್ ಧರಿಸುವಂತೆ ತಿಳಿಸಿದ್ದಾರೆ. ಐ.ಎಸ್.ಐ ಮಾರ್ಕ್ ಇರುವಂತಹ ಉತ್ತಮ ಗುಣಮಟ್ಟದ ಹೆಲ್ಮೆಟ್‌ನ್ನು ಧರಿಸಿ ಬಂದಂತಹ ಸವಾರರಿಗೆ ಹೂವನ್ನು ನೀಡಿ ಅಭಿನಂದನೆ ಸಲ್ಲಿಸಿದರು.
ಐ.ಎಸ್.ಐ ಮಾರ್ಕ್ ಇಲ್ಲದ ಗುಣಮಟ್ಟವಲ್ಲದ ಹೆಲ್ಮೆಟ್ ಧರಿಸಿ ಸಂಚಾರ ಮಾಡುವ ವೇಳೆ ಅಪಘಾತ ಸಂಭವಿಸಿ ಅನೇಕ ಜನರು ಮೃತಪಟ್ಟಿರುವ ನಿದರ್ಶನೆಗಳಿವೆ. ಹಾಗಾಗಿ ಮುಂದಿನ ದಿನಗಳಲ್ಲಿ ಹಾಫ್ ಹೆಲ್ಮೆಟ್ ಮತ್ತು ಐ.ಎಸ್.ಐ ಮಾರ್ಕ್ ಇಲ್ಲದ ಕಳಪೆ ಗುಣ ಮಟ್ಟದಲ್ಲದ ಹೆಲ್ಮೆಟ್ ಧರಿಸಿ ಸವಾರಿ ಮಾಡುವ ಸವಾರರು ಮೇಲೆ ಭಾರತೀಯ ಮೋಟಾರ್ ವಾಹನಗಳ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದು ಪೋಲಿಸ್ ಇಲಾಖೆ ತಿಳಿಸಿದೆ.
ರಸ್ತೆಯಲ್ಲಿ ವ್ಹೀಲಿಂಗ್ ಪೋಷಕರ ವಿರುದ್ಧ ಪ್ರಕರಣ.. ಬೆಂಗಳೂರಿನ ಮುಖ್ಯರಸ್ತೆಯಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ಬಾಲಕನನ್ನು ತಲಘಟ್ಟಪುರ ಸಂಚಾರ ಠಾಣಾ ಪೊಲೀಸರು ವಶಕ್ಕೆ ಪಡೆದು ದ್ವಿಚಕ್ರ ವಾಹನವನ್ನು ಜಪ್ತಿ ಮಾಡಿದ್ದ ಘಟನೆ ಕಳೆದ ವಾರ ನಡೆದಿತ್ತು. ಬಾಲಕನೊಬ್ಬ ಡಿಯೋ ಸ್ಕೂಟರ್‌ನಲ್ಲಿ ಹಿಂಬದಿ ಮತ್ತೊಬ್ಬನನ್ನು ಕೂರಿಸಿಕೊಂಡು ಬನಶಂಕರಿ 80 ಅಡಿ ರಸ್ತೆಯಲ್ಲಿ ಅಪಾಯಕಾರಿ ವ್ಹೀಲಿಂಗ್ ಮಾಡುತ್ತಿದ್ದ. ವಿಡಿಯೋ ಸೆರೆ ಹಿಡಿದ ಸಾರ್ವಜನಿಕರೊಬ್ಬರು ಸಂಚಾರ ಪೊಲೀಸರ ಟ್ವಿಟರ್ ಖಾತೆಗೆ ಟ್ಯಾಗ್ ಮಾಡಿದ್ದರು. ವಾಹನದ ನಂಬರ್ ಆಧರಿಸಿ ಬಾಲಕನ ಮನೆ ಪತ್ತೆ ಮಾಡಿ ವಾಹನ ವಶಕ್ಕೆ ಪಡೆಯಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ. ಬಾಲಕ ಅಪ್ರಾಪ್ತನಾಗಿದ್ದು ಪೋಷಕರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ 14,250 ರೂಪಾಯಿ ಸಂಚಾರ ದಂಡ ಪಾವತಿಸಿದ ಯುವಕ