ಚಿಕ್ಕಮಗಳೂರು: 15 ವರ್ಷ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ಸಲ್ಲಿಸಿದ ಸಿಬ್ಬಂದಿವೋರ್ವರಿಗೆ ಜೀವಭಯ ಕಾಡುತ್ತಿದೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಪೊಲೀಸ್ ಪೇದೆಯ ಆರೋಪವಾಗಿದೆ.
ಚಿನ್ನಾಭೋವಿ ಎಂಬುವರೇ ಈ ರೀತಿ ಜೀವ ಭಯದಿಂದ ಕೆಲಸ ಬಿಟ್ಟಿರುವ ಪೊಲೀಸ್ ಪೇದೆ. ಇವರು ಚಿಕ್ಕಮಗಳೂರಿನ ಭೂಸೇನಹಳ್ಳಿ ಕಾಲೋನಿ ನಿವಾಸಿಯಾಗಿದ್ದು, ಜಯಪುರ ಹಾಗೂ ಬಾಳೆಹೊನ್ನೂರು ಠಾಣೆಯಲ್ಲಿ ಪೇದೆಯಾಗಿ ಕೆಲಸ ನಿರ್ವಹಿಸಿದ್ದಾರೆ.
ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುವಾಗ ಒಂದು ಕಾರಿನಲ್ಲಿ ಬಂದಿದ್ದರೆನ್ನಲಾದ ದುಷ್ಕರ್ಮಿಗಳು ಚಿನ್ನಾಭೋವಿಯವರ ಕೊಲೆಗೆ ಯತ್ನಿಸಿದ್ದರಂತೆ. ಅಲ್ಲಿಂದ ತಪ್ಪಿಸಿಕೊಂಡು ಬಂದು ಕೊಲೆ ಮಾಡಲು ಯತ್ನಿಸಿದವರ ಫೋಟೊ ಸಮೇತ ದೂರು ನೀಡಿದ್ದೇನೆ. ಈ ಕುರಿತು ಎಫ್.ಐ.ಆರ್. ಕೂಡ ದಾಖಲಾಗಿದೆ. ಆದರೇ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲವೆಂದು ತನ್ನ ಇಲಾಖೆಯ ಮೇಲೆಯೇ ಚಿನ್ನಾಭೋವಿ ಆರೋಪಿಸಿದ್ದಾರೆ.
ಇದೇ ಜೀವಭಯದಿಂದ ಕೆಲಸಕ್ಕೆ ಹೋಗದ ಕಾರಣ ಚಿನ್ನಾಭೋವಿ ಅವರನ್ನು ಬಾಳೆಹೊನ್ನೂರಿಂದ ಮೂಡಿಗೆರೆಯ ಗೋಣಿಬೀಡು ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ಅಲ್ಲೂ ಕೂಡ ಯಾರೋ ತನ್ನನ್ನು ಹಿಂಬಾಲಿಸುತ್ತಿದ್ದಾರೆ ಎಂದು ಜೀವಕ್ಕೆ ಹೆದರಿ ಕಳೆದೊಂದು ವರ್ಷದಿಂದ ಕೆಲಸಕ್ಕೆ ಹೋಗಿಲ್ಲವಂತೆ. ಇಷ್ಟೆಲ್ಲ ಆದರೂ ಆರೋಪಿಗಳ ವಿರುದ್ಧ ದೂರು ದಾಖಲಿಸಿಕೊಂಡಿರುವ ಚಿಕ್ಕಮಳೂರು ಪೊಲೀಸರು ತನಿಖೆ ನಡೆಸದೆ ಚಿನ್ನಸ್ವಾಮಿಗೆ ಹುಚ್ಚ ಎಂಬ ಪಟ್ಟ ಕಟ್ಟಿ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದಾರೆ ಎನ್ನಲಾಗ್ತಿದೆ. ಆದ್ರೆ, ಈ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕೆಂದು ಪೇದೆ ಚಿನ್ನಾಭೋವಿ ಆಗ್ರಹಿಸಿದ್ದಾರೆ.