ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿಗೆ ಸದಾ ಪ್ರವಾಸಿಗರ ದಂಡು ಹರಿದು ಬರುತ್ತಿರುತ್ತದೆ, ಮುಳ್ಳಯ್ಯನಗಿರಿ, ದತ್ತಪೀಠ, ಸೀತಾಳಯ್ಯನಗಿರಿ, ಮಾಣಿಕ್ಯಾಧಾರಕ್ಕೆ ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರ ವಾಹನಗಳ ಆಗಮನದಿಂದ ಗಂಟೆಗಟ್ಟಲೆ ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ಇತ್ತು. ಆದರೆ, ಇನ್ನುಮುಂದೆ ಈ ಕಿರಿಕಿರಿ ಇರುವುದಿಲ್ಲ, ರಾಜ್ಯದ ಪ್ರಮುಖ ಪ್ರವಾಸಿ ತಾಣವಾದ ಮುಳ್ಳಯ್ಯನ ಗಿರಿಯಲ್ಲಿ ಟ್ರಾಫಿಕ್ ಕಂಟ್ರೋಲ್ ಮಾಡುವುದಕ್ಕೆ ಜಿಲ್ಲಾಡಳಿತ ಹೊಸ ನಿಯಮ ಜಾರಿಗೆ ತಂದಿದೆ.
ಮುಳ್ಳಯ್ಯಗಿರಿ ಭಾಗದಲ್ಲಿ ಟ್ರಾಫಿಕ್ ಕಂಟ್ರೋಲ್ ಮಾಡುವುದಕ್ಕೆ ಹೊಸ ನಿಯಮ: ಈ ಕುರಿತು ಜಿಕ್ಕಮಗಳೂರು ಜಿಲ್ಲಾಧಿಕಾರಿ ಕೆಎನ್ ರಮೇಶ್ ಮಾತನಾಡಿ, ಮುಳ್ಳಯ್ಯಗಿರಿ ಭಾಗದಲ್ಲಿ ಹೆಚ್ಚು ಪ್ರವಾಸಿಗರು ಬರುತ್ತಿದ್ದರು, ಅವರ ನಿಯಂತ್ರಣಕ್ಕೆ ಮೊಬೈಲ್ ಸ್ವ್ಕಾಡ್ ಮತ್ತು ಪೊಲೀಸರ ತಂಡ ರಚನೆ ಮಾಡಲಾಗಿತ್ತು ಅವರು ರೌಡ್ಸ್ ಮಾಡಿದ್ದಾರೆ. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಂಡಿದ್ದಾರೆ.
ಸಾಮನ್ಯವಾಗಿ ಮುಳ್ಳಯನಗಿರಿ ಬೆಟ್ಟಕ್ಕೆ ಸಾಕಷ್ಟು ಪ್ರವಾಸಿಗರು ಆಗಮಿಸುತ್ತಾರೆ. ಅಲ್ಲಿ ಸ್ವಚ್ಛತೆ ಕಾಪಾಡದಿರುವ ಹಾಗೂ ಟ್ರಾಫಿಕ್ ಜಾಮ್ ಉಂಟಾಗುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ನಾವು ಅಲ್ಲಂಪುರದಲ್ಲಿ ಐದು ಎಕರೆ ಜಾಗವನ್ನು ಗುರುತು ಮಾಡಲಾಗಿದ್ದು, ಅಲ್ಲಿ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡುತ್ತೇವೆ. ಅಭಿವೃದ್ದಿಯಾದ ಮೇಲೆ ಯಾವುದೇ ಕಾರಣಕ್ಕೂ ಖಾಸಗಿ ವಾಹನವನ್ನು ಮುಳ್ಳಯ್ಯನಗಿರಿ ಮೇಲೆ ಹತ್ತಲು ಬೀಡುವುದಿಲ್ಲ, ಅಲ್ಲಿಂದ ನಮ್ಮ ಪರ್ಮಿಟ್ ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದರು.
ಇನ್ಮುಂದೆ ಯಾವುದೇ ಸಮಸ್ಯೆ ಇರಲ್ಲ..ಡಿಸಿ ಅಭಯ: ಸೌಂದರ್ಯದ ಗಣಿ ಕಾಫಿನಾಡ ಮುಳ್ಳಯ್ಯನಗಿರಿ, ದತ್ತಪೀಠ, ಸೀತಾಳಯ್ಯನಗಿರಿ, ಮಾಣಿಕ್ಯಾಧಾರ, ಗಾಳಿಕೆರೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಇನ್ನು ಮುಂದೆ ಟ್ರಾಫಿಕ್ ಜಾಮ್ ಸಮಸ್ಯೆ ಇರುವುದಿಲ್ಲ. ಹಾವು ಬಳುಕಿನ ಮೈಕಟ್ಟಿನ ರಸ್ತೆಯಲ್ಲಿ ಪ್ರವಾಸಿಗರು ಬೇಕಾಬಿಟ್ಟಿ ಗಾಡಿ ಹೊಡಿಸುತ್ತಿದ್ದರು. ಎಲ್ಲೆಂದರಲ್ಲಿ ವಾಹನ ಪಾರ್ಕ್ ಮಾಡಿ ಟ್ರಾಫಿಕ್ ಜಾಮ್ ಕಿರಿಕಿರಿ ಉಂಟು ಮಾಡುತ್ತಿದ್ದರು.
ಗಾಡಿ ಕೆಳಗೆ ಇಳಿದರೆ ಹಾಳಾಗುತ್ತೆ ಎಂಬಂತೆ ಕಿರಿದಾದ ರಸ್ತೆಯಲ್ಲಿ ಅರ್ಧ ರಸ್ತೆಗೆ ಪಾರ್ಕ್ ಮಾಡುತ್ತಿದ್ದರು. ಮುಳ್ಳಯ್ಯನಗಿರಿಯಲ್ಲಿ ಟ್ರಾಫಿಕ್ ಜಾಮ್ ಆದರೆ ಗಂಟೆಗಟ್ಟಲೇ ಕಾಯಬೇಕಿತ್ತು. ಸದ್ಯ ಈ ನಿತ್ಯದ ಗೋಳು ತಪ್ಪಿಸಲು ಇದೀಗ ಜಿಲ್ಲಾಡಳಿತವೇ ಗಿರಿಭಾಗದ ಪ್ರವಾಸಿ ತಾಣಗಳಿಗೆ ಪರ್ಮಿಟ್ ವಾಹನಗಳನ್ನ ಬಿಡುವುದಕ್ಕೆ ತೀರ್ಮಾನಿಸಿದೆ. ನೀವು ಬೆಂಗಳೂರು - ಮೈಸೂರು ಸೇರಿದಂತೆ ಎಲ್ಲಿಂದಲೇ ನಿಮ್ಮ ಗಾಡಿಯಲ್ಲಿ ಬಂದರು ಚಿಕ್ಕಮಗಳೂರಿನಿಂದ ಗಿರಿಭಾಗಕ್ಕೆ ಜಿಲ್ಲಾಡಳಿತದ ಗಾಡಿಗಳಲ್ಲೇ ಹೋಗಬೇಕು.
ಜಿಲ್ಲಾಡಳಿತವೇ ಸಿದ್ಧಗೊಳಿಸುತ್ತಿರುವ ಪಾರ್ಕಿಂಗ್ ಜಾಗದಲ್ಲಿ ವಾಹನ ಪಾರ್ಕ್ ಮಾಡಬೇಕು: ಸ್ವಂತ ವಾಹನಗಳಲ್ಲಿ ಬಂದರೂ ಕೂಡ ಚಿಕ್ಕಮಗಳೂರು ತಾಲೂಕಿನ ಅಲ್ಲಂಪುರದಲ್ಲಿ ಐದು ಎಕರೆ ಜಾಗದಲ್ಲಿ ಜಿಲ್ಲಾಡಳಿತವೇ ಸಿದ್ಧಗೊಳಿಸುತ್ತಿರುವ ಪಾರ್ಕಿಂಗ್ ಜಾಗದಲ್ಲಿ ಪಾರ್ಕ್ ಮಾಡಬೇಕು. ಅಲ್ಲಿ ಎಲ್ಲ ಸೌಲಭ್ಯವೂ ಇರಲಿದೆ. ನೀವು ನಿಮ್ಮ ಗಾಡಿಗಳನ್ನ ಅಲ್ಲೇ ಬಿಟ್ಟು ಜಿಲ್ಲಾಡಳಿತದ ಪರ್ಮಿಟ್ ಗಾಡಿಗಳಲ್ಲಿ ಹೋಗಬೇಕು. ಇನ್ಮುಂದೆ ಎಲ್ಲೆಂದರಲ್ಲಿ ಬಾಟಲ್ ಬೀಸಾಕುವುದು ಹಾಗೂ ಸ್ವಚ್ಛತೆ ಹದೆಗೆಡಿಸುವುದಕ್ಕೆ ಬ್ರೇಕ್ ಬೀಳಲಿದೆ. ತಂಪು ಪಾನಿಯಗಳ ಬಾಟ್ಲಿ, ಚಿಪ್ಸ್, ಕಡ್ಲೇಬೀಜ, ಬಟಾಣಿ, ಎಣ್ಣೆ-ಸೈಡ್ಸು ಇವೆಲ್ಲದ್ದಕ್ಕೂ ಅನುಮತಿ ಇರೋದಿಲ್ಲ.
ಗಿರಿಭಾಗಕ್ಕೆ ಸ್ವಂತ ವಾಹನಗಳಿಗೆ ಬ್ರೇಕ್: ಪ್ರವಾಸದ ಹೆಸರಲ್ಲಿ ಗಿರಿಭಾಗದಲ್ಲಿ ಮೋಜು-ಮಸ್ತಿ ಮಾಡುತ್ತಾರೆ ಎಂಬ ಆರೋಪವೂ ಇತ್ತು. ಗಿರಿಭಾಗಕ್ಕೆ ಸ್ವಂತ ವಾಹನಗಳಿಗೆ ಬ್ರೇಕ್ ಹಾಕಿ ಎಂಬ ಪರಿಸರವಾದಿಗಳ ಆಗ್ರಹವೂ ಇತ್ತು. ಇದೀಗ, ಕಾಲ ಕೂಡಿ ಬಂದಿದ್ದು ಶನಿವಾರ - ಭಾನುವಾರವಂತೂ ಮುಳ್ಳಯ್ಯನಗಿರಿಯಲ್ಲಿ ಹೇಳತೀರದ ಟ್ರಾಫಿಕ್ ಇರುತ್ತಿತ್ತು. ಪ್ಲಾಸ್ಟಿಕ್ ಕೂಡ ಅಷ್ಟೆ ಇರುತ್ತಿತ್ತು. ಇದೀಗ, ಜಿಲ್ಲಾಡಳಿತದ ಈ ನಡೆ ಸ್ಥಳೀಯರಿಗೆ ಖುಷಿ ತಂದಿದೆ.
ಗಿರಿಭಾಗದಲ್ಲಿ ನೂರಾರು ಹೋಂಸ್ಟೇ, ರೆಸಾರ್ಟ್‍ನವರ ಮಧ್ಯೆ ಜಿಲ್ಲಾಡಳಿತದ ಈ ತೀರ್ಮಾನ ಎಷ್ಟು ಪರಿಣಾಮಕಾರಿಯಾಗಿ, ಯಾವಾಗ ಕಾರ್ಯರೂಪಕ್ಕೆ ಬರುತ್ತೆ ಅನ್ನೋದನ್ನ ಕಾದು ನೋಡಬೇಕಾಗಿದೆ.
ಇದನ್ನೂ ಓದಿ:ಶತಮಾನದ ಹಿಂದಿನ ದುಬಾರಿ ಬೆಲೆಯ ಟೆಲಿಸ್ಕೋಪ್ ಮಾರಾಟ ಯತ್ನ: ಚಿಕ್ಕಮಗಳೂರಲ್ಲಿ ಆರೋಪಿ ಬಂಧನ