ಚಿಕ್ಕಮಗಳೂರು : ಜಿಲ್ಲೆಯ ಎನ್ ಆರ್‌ಪುರ ತಾಲೂಕಿನಲ್ಲಿ ಉಚಿತ ಅಕ್ಕಿಗೆ ಅಲೆದು ಅಲೆದು ಜನರು ಸುಸ್ತಾದ ಹಿನ್ನೆಲೆ ಹಾಗೂ ಸಾರ್ವಜನಿಕರಿಂದ ದೂರು ಬಂದ ಕಾರಣ ತಾಲೂಕಿನ ಫುಡ್ ಇನ್ಸ್ಪೆಕ್ಟರ್ಗೆ ಶಾಸಕ ಟಿ ಡಿ ರಾಜೇಗೌಡ ಸಾರ್ವಜನಿಕರ ಮುಂದೆಯೇ ಬೆವರಿಳಿಸಿದ್ದಾರೆ.
ಕಳೆದ ನಾಲ್ಕು ದಿನಗಳಿಂದ ಪಡಿತರಕ್ಕಾಗಿ ಸಾರ್ವಜನಿಕರು ನಿರಂತರ ಅಲೆದಾಟ ನಡೆಸ್ತಿದ್ದಾರೆ. ಇದರಿಂದಾಗಿ ಶೃಂಗೇರಿ ಶಾಸಕ ಟಿ ಡಿ ರಾಜೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಫುಡ್ ಇನ್ಸ್ಪೆಕ್ಟರ್ ವಿರೂಪಾಕ್ಷ ಅವರನ್ನ ಸ್ಥಳಕ್ಕೆ ಕರೆಯಿಸಿ ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ತಾಲೂಕಿನ ಬಿ ಹೆಚ್ ಕೈಮರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೂಡಲೇ ಸಮಸ್ಯೆ ಬಗೆಹರಿಸದಿದ್ದರೆ ಶಿಸ್ತು ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ್ದಾರೆ. ಉಚಿತ ಅಕ್ಕಿಗೆ ಜನ ನಿಮ್ಮ ಮನೆ ಬಾಗಿಲಿಗೆ ಬರಬೇಕಾ ಎಂದು ಗರಂ ಆಗಿದ್ದಾರೆ.
ಒಟಿಪಿ ಸಮಸ್ಯೆಯಿಂದ ಬಡವರಿಗೆ ಅಕ್ಕಿ ಸಿಗದೇ ಕಂಗಲಾಗಿದ್ದಾರೆ. ಎನ್ಆರ್‌ಪುರ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಸಮಸ್ಯೆ ಎದುರಾಗಿದೆ. ಎಲ್ಲ ಸಮಸ್ಯೆಗಳನ್ನೂ ಕೂಡಲೇ ಬಗೆಹರಿಸಬೇಕು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.