ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೊಕ್ಕಳ್ಳಿ, ಬಿ. ಹೊಸಳ್ಳಿ, ಬಾನಹಳ್ಳಿ, ಹೊಸಳ್ಳಿ, ಹಳೇಹಳ್ಳಿ, ಹೊಕ್ಕಳ್ಳಿ, ಬೆಳಗೋಡು, ತಳವಾರ, ಕೆಂಜಿಗೆ ಸೇರಿದಂತೆ ಹತ್ತಾರು ಹಳ್ಳಿಯ ಜನ ಹುಲಿ ದಾಳಿಯಿಂದ ಕಂಗೆಟ್ಟು ನಿದ್ದೆಯಲ್ಲೂ ಹುಲಿ ಬಂತು ಹುಲಿ ಅಂತಾ ಬೆಚ್ಚಿ ಬೀಳುವಂತ ಪರಿಸ್ಥಿತಿ ಎದುರಾಗಿದೆ.
ವಾರಕ್ಕೆರಡು ಹಸುಗಳನ್ನ ಗುಳುಂ ಸ್ವಾಹ ಮಾಡುತ್ತಿರುವ ವ್ಯಾಘ್ರನಿಂದ ಹಳ್ಳಿಗರು ಅಕ್ಷರಶಃ ಕಂಗಾಲಾಗಿದ್ದಾರೆ. ಈ ವ್ಯಾಘ್ರ ಕಳೆದೊಂದು ವರ್ಷದಲ್ಲಿ 50ಕ್ಕೂ ಹೆಚ್ಚು ರಾಸುಗಳನ್ನ ಬಲಿಪಡೆದಿದೆ. ಬಿ. ಹೊಸಳ್ಳಿ ಗ್ರಾಮದ ಪ್ರಸನ್ನ ಎಂಬುವರ ಎರಡು ಹಸು, ಒಂದು ಎಮ್ಮೆಯನ್ನೂ ಬಲಿ ಪಡೆದಿದ್ದರಿಂದ ಇಡೀ ಕುಟುಂಬವೇ ಚಿಂತೆಗೀಡಾಗಿದೆ.
ತಬ್ಬಲಿಯಾದ ಕರುಗಳು: ತಾಯಿ ಪ್ರೀತಿ, ಆರೈಕೆ ಇಲ್ಲದೆ ಹತ್ತಾರು ಕರುಗಳು ಅನಾಥವಾಗಿವೆ. ಹುಲಿ ದಾಳಿಯಿಂದ ನಾವೇ ಊರು ಬಿಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಹಸುಗಳನ್ನ ಕಳ್ಕೊಂಡ್ರು ಪರಿಹಾರವೂ ಸಿಗ್ತಿಲ್ಲ. ಜೀವನವೇ ಸಾಕಾಗಿದೆ ಅಂತ ರೈತರು ಅಳಲು ತೋಡಿಕೊಂಡಿದ್ದಾರೆ.
ಪ್ರಸ್ತುತ ಮಲೆನಾಡಲ್ಲಿ ಕಾಫಿ ಕೊಯ್ಲಿನ ಸಮಯ. ಆದ್ರೆ, ಹುಲಿ ಭಯದಿಂದ ಇದೀಗ ಕಾರ್ಮಿಕರು ಸಹ ಕೆಲಸಕ್ಕೆ ಬರುತ್ತಿಲ್ಲವಂತೆ. ಪದೇ-ಪದೆ ಹುಲಿ ದಾಳಿಯಿಂದ ಆತಂಕಗೊಂಡಿರುವ ಜನ, ಮನೆಯಿಂದ ಹೊರಬರೋದಕ್ಕೆ ಭಯ ಪಡುತ್ತಿದ್ದಾರೆ. ಕೇವಲ ಕಾರ್ಮಿಕರಷ್ಟೇ ಅಲ್ಲದೆ ತೋಟದ ಮಾಲೀಕರು ಕೂಡ ಕಾಫಿ ಎಸ್ಟೇಟ್ ಕಡೆ ಮುಖ ಮಾಡೋದಕ್ಕೆ ಹಿಂದೇಟು ಹಾಕುತ್ತಿದ್ದಾರೆ.
ಹುಲಿ ದಾಳಿಯಿಂದ ಕಂಗೆಟ್ಟ ರೈತರು ಹುಲಿಯನ್ನ ಸೆರೆ ಹಿಡಿದು ಸ್ಥಳಾಂತರಿಸುವಂತೆ ಅರಣ್ಯ ಇಲಾಖೆಗೆ ಹತ್ತಾರು ಬಾರಿ ಮನವಿ ಮಾಡಿದ್ದಾರೆ. ಆದ್ರೆ, ಅಧಿಕಾರಿಗಳು ಆಯ್ತು ಅಂತಾರೆ. ಆಮೇಲೆ ಸುಮ್ಮನಾಗ್ತಾರೆ. ಹುಲಿ ಬರ್ತಾನೆ ಇದೆ. ರಾಸುಗಳನ್ನ ತಿಂತಾನೆ ಇದೆ. ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸದ ಹಿನ್ನೆಲೆ ಜನ ನಾವು ಜೀವನ ಮಾಡೋದು ಹೇಗೆ ಎಂದು ಅರಣ್ಯ ಇಲಾಖೆಗೆ ಹಿಡಿಶಾಪ ಹಾಕುತ್ತಿದ್ದಾರೆ.
ಒಟ್ಟಾರೆಯಾಗಿ ಒಂದೆಡೆ ಆನೆ-ಹುಲಿ ದಾಳಿಯಿಂದ ಜನ ಕೃಷಿಯಿಂದಲೂ ಹಿಂದೆ ಸರಿಯುತ್ತಿದ್ದಾರೆ. ಮತ್ತೊಂದೆಡೆ ಹಾಲು ಮಾರಿ ಜೀವನದ ದಾರಿ ಕಂಡುಕೊಂಡಿದ್ದ ಜನರೂ ಈಗ ನೆಮ್ಮದಿ ಕಳೆದುಕೊಂಡಿದ್ದಾರೆ. ಇದು ಹೀಗೆ ಮುಂದುವರೆದರೆ ಭವಿಷ್ಯದ ಕಥೆಯೇನು? ಅನ್ನೋದು ಜಿಲ್ಲೆಯ ಜನರ ಪ್ರಶ್ನೆಯಾಗಿದೆ.
ಓದಿ: ಬೆಳಗಾವಿ ಮಕ್ಕಳ ಸಾವು ಪ್ರಕರಣ.. ಪ್ರಾಥಮಿಕ ಆರೋಗ್ಯ ಕೇಂದ್ರದ ಇಬ್ಬರು ಸಿಬ್ಬಂದಿ ಸಸ್ಪೆಂಡ್