ಚಿಕ್ಕಮಗಳೂರು: ಆನ್ಲೈನ್ನಲ್ಲಿ ಆರ್ಡರ್ ಮಾಡಿ, ಕಳೆದ ಒಂದು ವಾರದಿಂದ ಹೊಸ ಮೊಬೈಲ್ ಫೋನ್ ಬರುತ್ತೆ ಅಂತ ಕಾದು ಕುಳಿತಿದ್ದ ಜನರಿಗೆ ಸ್ವೀಟ್ ಬಾಕ್ಸ್ ಬಂದಿರುವ ವಿಚಿತ್ರ ಘಟನೆ ತಾಲೂಕಿನ ಮುಗುಳವಳ್ಳಿ ಗ್ರಾಮದಲ್ಲಿ ನಡೆದಿದೆ.
ಮುಗುಳವಳ್ಳಿ ಗ್ರಾಮದ ಕೆಲವರಿಗೆ ಕಳೆದ ಹತ್ತು ದಿನಗಳ ಹಿಂದೆ ಯುವತಿಯೊಬ್ಬಳು ಕರೆ ಮಾಡಿದ್ದಳು. ನಿಮ್ಮ ಫೋನ್ ಸಂಖ್ಯೆ ಲಕ್ಕಿ ನಂಬರ್ ಆಗಿ ಆಯ್ಕೆಯಾಗಿದೆ. 15 ಸಾವಿರದ ಮೊಬೈಲ್ ಕೇವಲ 1500 ರೂ. ಕೊಡ್ತೀವಿ. ನೀವು ಡೀಲ್ ಓಕೆ ಮಾಡಿದ್ರೆ ಈಗ್ಲೇ ಪೋಸ್ಟ್ ಮಾಡ್ತೀವಿ, ಇಲ್ದಿದ್ರೆ ಬೇರೆಯವರಿಗೆ ಕೊಡ್ತೀವಿ ಅಂತ ಹೇಳಿದ್ದಳು.
ಹೀಗೆಲ್ಲ ಚೀಪ್ ಆ್ಯಂಡ್ ಬೆಸ್ಟ್ ಅಂದಕೊಂಡು ಯೋಚನೆ ಮಾಡೋದ್ ಏನಿದೆ, 1500ಕ್ಕೆ ಹೈಫೈ ಮೊಬೈಲ್ ಸಿಗುತ್ತೆ, ಯಾಕ್ ಬಿಡೋದು ಅಂತ ಎಲ್ರೂ ಕಳ್ಸಿ ಬುಕ್ ಮಾಡಿದ್ದರು. ಆದ್ರೆ, ಒಬ್ರು ಅರ್ಡರ್ ಮಾಡಿರೋದು ಮತ್ತೊಬ್ಬರಿಗೆ ಗೊತ್ತಿಲ್ಲ. ಆ ಬಳಿಕ ಕೆಲವರಿಗೆ ಮಾತ್ರ ಪೋಸ್ಟ್ ಮೂಲಕ ಮೊಬೈಲ್ ಬಂದಿದೆ. ದುಡ್ಡ್ ಕೊಟ್ಟು ಆಸೆಗಣ್ಣಿನಿಂದ ಇನ್ನೂ ಕೆಲವರಿಗೆ ಮೊಬೈಲ್ ಇರಬೇಕಾದ ಬಾಕ್ಸಲ್ಲಿ ಸೋನ್ ಪಾಪ್ಡಿ ಬಂದಿದೆ.
ತೀರ್ಥಕುಮಾರ್ ಎಂಬುವರಿಗೆ ಬಾಕ್ಸಲ್ಲಿ ಸ್ವೀಟ್ ಬಂದಿದೆ. ಮತ್ತೊಬ್ಬರಿಗೆ ವೇಸ್ಟ್ ಬಟ್ಟೆ. ಇನ್ನೊಬ್ಬರಿಗೆ ಹಾಳಾಗಿರೋ ಚಾರ್ಜರ್. ಗಾಯತ್ರಿ ಅನ್ನೋರಿಗೆ ಡಮ್ಮಿ ಪವರ್ ಬ್ಯಾಂಕ್ ಕಳಿಸಿದ್ದಾರೆ. ಹೀಗೆ ಇವರಿಬ್ಬರಿಗೆ ಮೋಸವಾಗಿರೋ ಸುದ್ದಿ ತಿಳಿದು ಉಳಿದವರು ಕೂಡ ನಮಗೂ ಇದೇ ರೀತಿ ವಂಚಿಸಿದ್ದಾರೆ ಅಂತ ಅಳಲು ತೋಡಿಕೊಂಡಿದ್ದಾರೆ. ನಾವು ಮೋಸ ಹೋಗಿದ್ದೇವೆ. ನೀವ್ಯಾರು ಮೋಸ ಹೋಗ್ಬೇಡಿ ಅಂತ ಜನರಿಗೆ ಮನವಿ ಮಾಡಿದ್ದಾರೆ.