ಚಿಕ್ಕಮಗಳೂರು: ಜಿಲ್ಲೆಯಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಅಜ್ಜಂಪುರ ತಾಲೂಕಿನ ಸುತ್ತಮುತ್ತಲ ಹತ್ತಾರು ಹಳ್ಳಿಗಳಲ್ಲಿ ಈರುಳ್ಳಿ ಬೆಳೆದ ರೈತರು ತೊಂದರೆಯಲ್ಲಿದ್ದಾರೆ.
ಶಿವನಿ, ಗೌರಪುರ, ಹೆಬ್ಬೂರು, ಮಾಳೇನಹಳ್ಳಿ, ಬಂಕನಕಟ್ಟೆ ಮುಗುಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಬೆಳೆದ ಈರುಳ್ಳಿ ಸಂಪೂರ್ಣ ಕೊಳೆತು ಹೋಗಿದೆ. ಹೊತ್ತಲ್ಲದ ಹೊತ್ತಲ್ಲಿ ಇದ್ದಕ್ಕಿದ್ದಂತೆ ಸುರಿಯುವ ಮಳೆ ರೈತರ ಬದುಕನ್ನು ಆತಂಕಕ್ಕೆ ತಳ್ಳಿದೆ. ಸಾವಿರಾರು ಎಕರೆ ಪ್ರದೇಶದಲ್ಲಿದ್ದ ಬೆಳೆ ನೆಲದಲ್ಲೇ ಕೊಳೆಯುತ್ತಿದೆ.
ಇದನ್ನೂ ಓದಿ: 1,123 ಕೆ.ಜಿ ಈರುಳ್ಳಿ ಮಾರಿದ ರೈತನಿಗೆ ಉಳಿದದ್ದು ಕೇವಲ 13 ರೂಪಾಯಿ ಮಾತ್ರ!
ಕಳೆದೊಂದು ವಾರದಿಂದ ಕಾಫಿನಾಡಿನ ಬಯಲುಸೀಮೆಯ ಭಾಗದಲ್ಲಿ ಜೋರು ಮಳೆ ಸುರಿಯುತ್ತಿದೆ. ಮಳೆಯಿಂದಾಗಿ ರೈತರು ಹೊಲದೆಡೆ ಮುಖ ಮಾಡದಂತಹ ಸ್ಥಿತಿ ಇದೆ. ಹೊಲದಲ್ಲೇ ಈರುಳ್ಳಿ ಕೊಳೆತು ಹೋಗುತ್ತಿದೆ. ಕಿತ್ತು ಹೊಲದಲ್ಲೇ ಜೋಡಿಸಿದ್ದ ಈರುಳ್ಳಿಯೂ ಸಹ ಮತ್ತೆ ಮಣ್ಣಲ್ಲಿ ಹೂತು ಹೋಗಿದೆ. ಸರ್ಕಾರ ನಮಗೆ ಸೂಕ್ತ ಪರಿಹಾರ ನೀಡಬೇಕು. ಈಗ ನೀಡಿರುವ ಪರಿಹಾರ ಏನಕ್ಕೂ ಸಾಲಲ್ಲ ಎಂದು ಸರ್ಕಾರದ ವಿರುದ್ಧ ರೈತರು ಅಸಮಾಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ: ರೈತನಿಗೇ ಕಣ್ಣೀರು ತರಿಸುತ್ತಿರುವ ಈರುಳ್ಳಿ: ಬೆಲೆ ಕುಸಿತದಿಂದ ಸಾಗಾಟ ವೆಚ್ಚವೂ ಬಾರದೆ ರೈತ ಕಂಗಾಲು
ಅಜ್ಜಂಪುರ ಮಾತ್ರವಲ್ಲ, ಕಡೂರಿನ ಕೆಲವು ಭಾಗದ ಸ್ಥಿತಿ ಕೂಡ ಹೀಗೆಯೇ ಆಗಿದೆ. ಎರಡ್ಮೂರು ದಶಕಗಳಿಂದ ಶಾಶ್ವತ ಬರ ಎದುರಿಸ್ತಿದ್ದ ತಾಲೂಕಿನ ರೈತರು ಕಳೆದ ಎರಡ್ಮೂರು ವರ್ಷದ ಮಳೆಗೆ ತತ್ತರಿಸಿದ್ದಾರೆ.