ಚಿಕ್ಕಮಗಳೂರು: ಮೂಲ ಸೌಲಭ್ಯಗಳಿಂದ ವಂಚಿತವಾಗಿರುವ ಜಿಲ್ಲೆಯ ಕಳಸ ತಾಲೂಕಿನ ಬಿಳಿಗಲ್ ಗ್ರಾಮಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಿಳಿಗಲ್ ಗ್ರಾಮದ ಜನರು ಹಲವು ವರ್ಷಗಳಿಂದ ಮೂಲ ಸೌಕರ್ಯದಿಂದ ವಂಚಿತರಾಗಿ ಬದುಕು ನಡೆಸುತ್ತಿದ್ದರು. ಗ್ರಾಮದ ಸಮಸ್ಯೆಗಳ ಬಗ್ಗೆ ಈ ಹಿಂದೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ರೀತಿಯ ಪ್ರಯೋಜನವಾಗಿರಲಿಲ್ಲ.
ಕೊನೆಗೂ ಗ್ರಾಮಸ್ಥರ ಕೂಗು ಅಧಿಕಾರಿಗಳಿಗೆ ಮುಟ್ಟಿದ್ದು, ಕಳಸ ತಹಶೀಲ್ದಾರ್ ಮಂಜುನಾಥ್, ಕಂದಾಯ ಇಲಾಖೆಯ ಅಜ್ಜೇಗೌಡ, ಆರ್ಐ ಪ್ರದೀಪ್ ಕುಮಾರ್, ಪಿಡಿಓ ಅರುಣ್, ಮೂಡಿಗೆರೆ ಶಾಸಕರ ಸಹಾಯಕರಾದ ಶಂಶುದ್ದಿನ್ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಉದಯ್ ಕುಮಾರ್ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಗ್ರಾಮಸ್ಥರ ಕುಂದುಕೊರತೆಗಳನ್ನು ಆಲಿಸಿದ್ದಾರೆ. ಕಳೆದ ವರ್ಷ ಕರಡಿ ದಾಳಿಯಿಂದ ಕಾಲು ಕಳೆದುಕೊಂಡ ಬೆಳ್ಳಪ್ಪ ಎಂಬುವವರ ಮನೆಗೆ ಭೇಟಿ ನೀಡಿದ ಅಧಿಕಾರಿಗಳು ಮುಂದಿನ ತಿಂಗಳಿನಿಂದ ಅಂಗವಿಕಲರ ಮಾಸಾಶನ ಬರುವಂತೆ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.
ಬಿಳಿಗಲ್ ಗ್ರಾಮಸ್ಥರು ಕಳೆದ 50 ವರ್ಷಗಳಿಂದ ಇಲ್ಲಿ ವಾಸವಿದ್ದಾರೆ. ಕುದುರೆಮುಖ ಕಂಪನಿ ಪ್ರಾರಂಭಗೊಂಡಾಗ ಲಕ್ಯಾ, ಕಾರಮಣ್ಣು ಗ್ರಾಮಗಳಿಂದ ಇವರನ್ನು ಒಕ್ಕಲೆಬ್ಬಿಸಿ ಬಿಳಗಲ್ ಗ್ರಾಮದಲ್ಲಿ ಪುನರ್ವಸತಿ ಕಲ್ಪಿಸಲಾಗಿತ್ತು. ಆದರೆ, ಗ್ರಾಮಸ್ಥರು 50 ವರ್ಷಗಳಿಂದ ಸರಿಯಾದ ಮೂಲ ಸೌಕರ್ಯಗಳಿಲ್ಲದೇ ಈ ಗ್ರಾಮದಲ್ಲಿ ಜೀವನ ನಡೆಸುತ್ತಿದ್ದಾರೆ. ಸದ್ಯ ಗ್ರಾಮಸ್ಥರು, ರಸ್ತೆ ಡಾಂಬರೀಕರಣ, ದೂರವಾಣಿ, ಕುಡಿಯೋ ನೀರಿನ ಸೌಲಭ್ಯ, ಸೇತುವೆಗೆ ತಡೆಗೋಡೆ, ಫಾರಂ 50, 53, 57ರಲ್ಲಿ ಅರ್ಜಿ ಸಲ್ಲಿಸಿದವರಿಗೆ ಜಮೀನು ಮಂಜೂರು, ಕಾಲು ಸಂಕಗಳನ್ನು ನಿರ್ಮಾಣ, ತೂಗು ಸೇತುವೆ ದುರಸ್ತಿ ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ.
ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮೂಲ ಸೌಲಭ್ಯ ಕಲ್ಪಿಸಿ ಕೊಡುವ ಭರವಸೆ ನೀಡಿರೋದ್ರಿಂದ ಬಿಳಿಗಲ್ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರು: ಕಾಡಾನೆ ದಾಳಿಗೆ ಓರ್ವ ಬಲಿ
ಮೂಲ ಸೌಕರ್ಯ ಕಲ್ಪಿಸುವಂತೆ ಪ್ರಧಾನಿ ಮೋದಿಗೆ ಪತ್ರ: ಇತ್ತೀಚಿಗೆ, ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕುಂಬಳಡಿಕೆ ಗ್ರಾಮದ ಜನರು ನಮಗೆ ಸರಿಯಾದ ಮೂಲ ಸೌಕರ್ಯಗಳಿಲ್ಲವೆಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ಈ ಮೂಲಕ ತಮ್ಮ ಸಮಸ್ಯೆಗಳನ್ನು ಪರಿಹರಿಸುವಂತೆ ಕೋರಿದ್ದರು. ಇದಕ್ಕೆ ಪ್ರಧಾನಿ ಕಚೇರಿಯಿಂದ ಪೂರಕ ಪ್ರತಿಕ್ರಿಯೆ ದೊರೆತಿತ್ತು. ಈ ಗ್ರಾಮದಲ್ಲಿ 70ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು, ಕನಿಷ್ಠ ಮೂಲ ಸೌಕರ್ಯ ಇಲ್ಲದೇ ದಿನ ದೂಡುವಂತಾಗಿದೆ.
ಕಳೆದ ಮೂರು ದಶಕಗಳಿಂದ ಇಲ್ಲಿನ ಜನರು ಇದೇ ರೀತಿ ಜೀವನ ಸಾಗಿಸುತ್ತಿದ್ದಾರೆ. ಮೂಲ ಸೌಕರ್ಯ ಕಲ್ಪಿಸುವಂತೆ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಗ್ರಾಮಸ್ಥರು ದೂರಿದ್ದರು. ಹಾಗಾಗಿ ತಮ್ಮ ಸಮಸ್ಯೆಗಳನ್ನು ಪರಿಹಾರಕೊಳ್ಳಲು ಗ್ರಾಮಸ್ಥರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಖುದ್ದಾಗಿ ಪತ್ರ ಬರೆದಿದ್ದರು ಸಮಸ್ಯೆ ಬಗೆಹರಿಸುವಂತೆ ವಿನಂತಿಸಿದ್ದರು.