ಚಿಕ್ಕಮಗಳೂರು : ಧರ್ಮಸ್ಥಳಕ್ಕೆ ಬಸ್ಸಿಲ್ಲ ಎಂದು ಪ್ರಯಾಣಿಕರು ರಾತ್ರಿ ಪ್ರತಿಭಟನೆ ನಡೆಸಿರುವ ಘಟನೆ ಶನಿವಾರ ಚಿಕ್ಕಮಗಳೂರು ಜಿಲ್ಲಾ ಕೇಂದ್ರದ ಬಸ್ ನಿಲ್ದಾಣದಲ್ಲಿ ನಡೆದಿದೆ.
ಧರ್ಮಸ್ಥಳದಲ್ಲಿ ಡಿಸೆಂಬರ್ 12(ನಾಳೆ) ರಂದು ಮಂಜುನಾಥ ಸ್ವಾಮಿ ದೇಗುಲದಲ್ಲಿ ಲಕ್ಷ ದೀಪೋತ್ಸವ ಪೂಜಾ ಕಾರ್ಯ ಇದೆ. ಈ ಪೂಜಾ ಕೈಂಕರ್ಯದ ಕಾರ್ಯಕ್ರಮಕ್ಕೆ ಹೋಗಲು ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಪ್ರಯಾಣಿಕರು ನಿತ್ಯ ಸಂಚರಿಸುತ್ತಿದ್ದಾರೆ. ಹೀಗೆ ಚಿಕ್ಕಮಗಳೂರು ಬಸ್ ನಿಲ್ದಾಣಕ್ಕೆ ಶನಿವಾರ ರಾತ್ರಿ ಬಂದಿದ್ದ ನೂರಾರು ಪ್ರಯಾಣಿಕರು ಬಸ್ ಇಲ್ಲದ್ದರಿಂದ ಬಸ್ ನಿಲ್ದಾಣದೊಳಗಡೆಯೇ ರಾತ್ರಿ ಕೆಲ ಕಾಲ ಪ್ರತಿಭಟನೆ ನಡೆಸಿದರು.
ಶನಿವಾರ ಸಂಜೆ 7 ಗಂಟೆ ಸುಮಾರಿಗೆ ಬಸ್ ನಿಲ್ದಾಣಕ್ಕೆ ಬಂದರೂ ಕೂಡ ಧರ್ಮಸ್ಥಳಕ್ಕೆ ಬಸ್ ಇರಲಿಲ್ಲ. ಬೇರೆ-ಬೇರೆ ಮಾರ್ಗಗಳಿಂದ ಬಸ್ ಬಂದರೂ ಕೂಡ ಶಕ್ತಿ ಯೋಜನೆಯಿಂದ ಬಸ್ಸಿನಲ್ಲಿ ನಿಲ್ಲುವುದಕ್ಕೂ ಜಾಗ ಇರಲಿಲ್ಲ. ಹಾಗಾಗಿ, ಪ್ರಯಾಣಿಕರು ಬೇರೆ ಬಸ್ಸಿನಲ್ಲಿ ಹೋಗೋಣ ಎಂದು ಕಾದು ಕುಳಿತಿದ್ದರು. ಆದರೆ, ಬಸ್ ಬರಲೇ ಇಲ್ಲ. ದೂರದ ಊರಿಂದ ಬಂದಿದ್ದಂತಹ ನೂರಾರು ಮಹಿಳೆಯರು ಹಾಗೂ ಮಕ್ಕಳು ಸರ್ಕಾರಿ ಬಸ್ ನಿಲ್ದಾಣದೊಳಗಡೆ ಮಲಗಿದ್ದರು.
ಬೇಲೂರು ಡಿಪೋದಿಂದ ಬಸ್ : ಬಸ್ ನಿಲ್ದಾಣದಿಂದ ಬಸ್ ಇಲ್ಲದಕ್ಕೆ ಪ್ರಯಾಣಿಕರು ಅಸಮಾಧಾನ ಹೊರ ಹಾಕಿದ್ದಾರೆ. ನೂರಾರು ಪ್ರಯಾಣಿಕರು ಎಲ್ಲೆಂದರಲ್ಲಿ ಮಲಗಿದರು. ಕೂಡಲೇ ಬಸ್ ಬಿಡಬೇಕು ಎಂದು ಆಗ್ರಹಿಸಿದರು. ಬಳಿಕ ಪ್ರಯಾಣಿಕರ ಆಕ್ರೋಶ ಕಂಡ ಬಸ್ ಡಿಪೋ ಅಧಿಕಾರಿಗಳು ಬೇಲೂರು ಡಿಪೋನಿಂದ ಬಸ್‌ಗಳನ್ನು ಕಳುಹಿಸಿದ್ದಾರೆ.
3 ದಿನ ಧರ್ಮಸ್ಥಳಕ್ಕೆ ಬಸ್ ಬಿಡಲು ನಿರ್ಧಾರ : ಮೊದಲೇ ಹೇಳಿದಂತೆ ನಾಳೆಯಿಂದ ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ ಪೂಜೆ ಇರುವುದರಿಂದ ಸಾವಿರಾರು ಭಕ್ತರು ಧರ್ಮಸ್ಥಳಕ್ಕೆ ತೆರಳುತ್ತಿದ್ದಾರೆ. ಹಾಗಾಗಿ, ಭಾನುವಾರದಿಂದಲೇ ಮೂರು ದಿನಗಳ ಕಾಲ ಚಿಕ್ಕಮಗಳೂರಿನ ಆರು ಡಿಪೋಗಳಿಂದಲೂ ಕೂಡ ಧರ್ಮಸ್ಥಳಕ್ಕೆ ಬಸ್‌ಗಳನ್ನು ಬಿಡಲು ಅಧಿಕಾರಿಗಳು ತೀರ್ಮಾನಿಸಿದ್ದರು. ಮೂರು ದಿನಗಳ ಕಾಲ ಸಂಜೆಯ ಬಳಿಕ ಐದು ಬಸ್‌ಗಳು ನಿತ್ಯ ಧರ್ಮಸ್ಥಳಕ್ಕೆ ತೆರಳಲಿವೆ ಎಂದು ಅಧಿಕಾರಿಗಳು ತಿಳಿಸಿದ್ದರು. ನಿನ್ನೆಯೇ ಬಸ್‌ಗಳನ್ನು ಬಿಡುತ್ತಿದ್ದೆವು. ಆದರೆ, ಇಷ್ಟು ದೊಡ್ಡ ಪ್ರಮಾಣದಲ್ಲಿ ಪ್ರಯಾಣಿಕರು ಬರುತ್ತಾರೆ ಎಂದು ಊಹಿಸಿರಲಿಲ್ಲ. ಹಾಗಾಗಿ ಸಮಸ್ಯೆಯಾಗಿದೆ. ಇದೀಗ ಬಸ್ಸುಗಳು ಓಡಾಡಲಿದ್ದು, ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಇಂದಿನಿಂದ ಬಸವನಗುಡಿ ಕಡಲೆಕಾಯಿ ಪರಿಷೆ; ಸಾವಿರಕ್ಕೂ ಹೆಚ್ಚು ಮಳಿಗೆ, ಪ್ಲಾಸ್ಟಿಕ್ ಮುಕ್ತ ಪರಿಷೆ