ಚಿಕ್ಕಮಗಳೂರು: ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಲಕ್ಷಾಂತರ ಕಾರ್ಮಿಕರು ತಮ್ಮ ಉದ್ಯೋಗ ಕಳೆದುಕೊಂಡು ಬೀದಿಗೆ ಬೀಳುವಂತಾಗಿತ್ತು. ವಲಸೆ ಕಾರ್ಮಿಕರು ಕೆಲಸವಿಲ್ಲದೆ ತಮ್ಮ ತಮ್ಮ ಊರು ಸೇರಿದ್ದರು. ಆದರೆ ಈ ಕಾರ್ಮಿಕರ ಕೈ ಹಿಡಿದಿದ್ದು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ. ಈ ಯೋಜನೆಯಿಂದ ಸಾವಿರಾರು ಕಾರ್ಮಿಕರಿಗೆ ಕೆಲಸ ಸಿಕ್ಕಂತಾಗಿದ್ದು, ಮುಳುಗುತ್ತಿದ್ದ ವ್ಯಕ್ತಿಗೆ ಈ ಯೋಜನೆಯಿಂದ ಆಸರೆ ಸಿಕ್ಕಂತಾಗಿದೆ. ಈ ಕುರಿತ ಒಂದು ವಿಶೇಷ ವರದಿ ಇಲ್ಲಿದೆ.
ಕೊರೊನಾ ವೈರಸ್ ರಾಜ್ಯದಲ್ಲಿ ಪ್ರವೇಶ ಮಾಡಿದ ಸಂದರ್ಭ ಹಲವಾರು ಕ್ಷೇತ್ರಗಳ ಮೇಲೆ ಪರಿಣಾಮ ಬೀರಿ, ಇಡೀ ಅರ್ಥ ವ್ಯವಸ್ಥೆಯನ್ನೇ ಬುಡ ಮೇಲು ಮಾಡಿತ್ತು. ಇದರಿಂದ ಸಾಕಷ್ಟು ಕಂಪನಿಗಳು ಮುಚ್ಚಿ ಹೋದವು. ನೂರಾರು ಕೆಲಸ ಕಾಮಗಾರಿಗಳು ನೆಲಕಚ್ಚಿದವು. ಕೂಲಿ ಕಾರ್ಮಿಕರು ಬೀದಿಗೆ ಬಂದರು. ತುತ್ತು ಅನ್ನಕ್ಕಾಗಿಯೂ ಪರದಾಡುವಂತಾಗಿತ್ತು. ಹೊತ್ತಿನ ತುತ್ತು ಚೀಲಕ್ಕಾಗಿ ಊರಿಂದ ಊರಿಗೆ ಹೋಗಿದ್ದ ಕಾರ್ಮಿಕರು ಕೆಲಸವಿಲ್ಲದೆ ತಮ್ಮ ತಮ್ಮ ಊರುಗಳಿಗೆ ಮರಳಿದರು. ಇಂತಹ ಸಂದರ್ಭದಲ್ಲಿ ಕೂಲಿ ಕಾರ್ಮಿಕರು ಹಾಗೂ ಗ್ರಾಮೀಣ ಭಾಗದ ಜನರ ಕೈ ಹಿಡಿದಿದ್ದು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ. ಈ ಯೋಜನೆಯಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಾವಿರಾರು ಕಾರ್ಮಿಕರು ಉದ್ಯೋಗ ಪಡೆದು ಜೀವನ ನಡೆಸುವಂತಾಗಿದೆ.
ಈ ವರ್ಷ ಚಿಕ್ಕಮಗಳೂರು ಜಿಲ್ಲೆಯಲ್ಲಿ 29 ಲಕ್ಷದಷ್ಟು ಮಾನವ ಗುರಿಯನ್ನು ಈ ಯೋಜನೆ ಹೊಂದಿದೆ. ಈಗಾಗಲೇ 16 ಲಕ್ಷದ 15 ಸಾವಿರ ಮಾನವ ಗುರಿಯನ್ನು ಜಿಲ್ಲೆಯ ವಿವಿಧ ತಾಲೂಕಿನಲ್ಲಿ ತಲುಪಿದೆ. ಶೇ. 52ರಷ್ಟು ಪ್ರಗತಿ ಸಾಧಿಸಿದ್ದು, ಪ್ರಮುಖವಾಗಿ ಭೂ ಅಭಿವೃದ್ಧಿ, ದೊಡ್ಡಿ, ಕೊಟ್ಟಿಗೆ, ಕಟ್ಟಡ ನಿರ್ಮಾಣ, ಕೊಳವೆ ಬಾವಿ, ಕೃಷಿ ಹೊಂಡಗಳು, ಇಂಗು ಗುಂಡಿಗಳ ಕೆಲಸಗಳನ್ನು ಸ್ಥಳೀಯ ಗ್ರಾಮ ಪಂಚಾಯತ್ ಹಾಗೂ ವಿವಿಧ ಇಲಾಖೆಗಳ ಜೊತೆ ಕೈ ಜೋಡಿಸಿ ಕೆಲಸ ಮಾಡಲಾಗುತ್ತಿದೆ.
ಈ ಯೋಜನೆಗೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಕೋವೀಡ್-19ನಿಂದ ಬೇರೆ ಬೇರೆ ದೂರದ ಊರುಗಳಿಗೆ ಉದ್ಯೋಗಕ್ಕಾಗಿ ವಲಸೆ ಹೋದಂತಹ ಕಾರ್ಮಿಕರು ವಾಪಸ್ ಆಗಿದ್ದು, ಅವರಿಗೆಲ್ಲಾ ಈ ಯೋಜನೆಯಿಂದ ಉದ್ಯೋಗ ದೊರೆತಂತಾಗಿದೆ. ಈ ವರ್ಷ 5,132 ಹೊಸ ಜಾಬ್ ಕಾರ್ಡ್ ನೀಡಲಾಗಿದ್ದು, ಇದರಿಂದ ವಲಸೆ ಹೋಗಿ ಬಂದತಹ ಜನರಿಗೆ ತುಂಬಾ ಅನುಕೂಲ ಆಗುತ್ತಿದೆ. ಒಟ್ಟು ಜಿಲ್ಲೆಯಲ್ಲಿ 13,251 ಸಾವಿರ ಜನರಿಗೆ ಉದ್ಯೋಗ ಸಿಕ್ಕಿದಂತಾಗಿದ್ದು, ವಿಶೇಷವಾಗಿ ಬಯಲುಸೀಮೆ ಭಾಗದಲ್ಲಿ ಹೆಚ್ಚು ಕೆಲಸ ನಡೆಯುತ್ತಿದೆ. ಮುಂದಿನ ದಿನಗಳಲ್ಲಿಯೂ ಹೆಚ್ಚಿನ ಬೇಡಿಕೆ ಈ ಯೋಜನೆಗೆ ಬರಲಿದ್ದು, ಇದರಿಂದ ನೈಸರ್ಗಿಕ ಸಂಪತ್ತು ಹೆಚ್ಚಿಸುವ ಕೆಲಸ ಮಾಡುತ್ತೇವೆ. ಇದರಿಂದ ತುಂಬಾ ಜನರಿಗೆ ಉದ್ಯೋಗ ಸಿಕ್ಕಿ ಬದುಕು ಕಟ್ಟಿಕೊಳ್ಳುವಂತಾಗಿದೆ ಎನ್ನುತ್ತಾರೆ ಇಲಾಖೆಯ ಅಧಿಕಾರಿಗಳು.
ಈ ಯೋಜನೆಯಿಂದ ನಮಗೆ ತುಂಬಾ ಅನುಕೂಲವಾಗಿದೆ. ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ತುಂಬಾ ತೊಂದರೆಯಾಗಿತ್ತು. ಆ ಸಮಯದಲ್ಲಿ ಸರ್ಕಾರದ ಈ ಯೋಜನೆಯಿಂದ ಕೃಷಿ ಹೊಂಡ, ಕೊಟ್ಟಿಗೆ ನಿರ್ಮಾಣ, ಕೆರೆಗಳ ನಿರ್ಮಾಣದಂತಹ ಕೆಲಸಗಳನ್ನು ಮಾಡುತ್ತಿದ್ದೇವೆ. ಪ್ರತಿನಿತ್ಯ 275 ರೂ. ಸಂಬಳವನ್ನು ನೀಡುತ್ತಿದ್ದು, ನೇರವಾಗಿ ನಮ್ಮ ಅಕೌಂಟಿಗೆ ಹಣವನ್ನು ಹಾಕುತ್ತಿದ್ದಾರೆ. ಈಗಾಗಲೇ 100 ದಿನಗಳು ಪೂರೈಕೆಯಾಗಿದ್ದು, ಇನ್ನು ಹೆಚ್ಚಿನ ದಿನಗಳು ಕೆಲಸ ದೊರೆತರೆ ತುಂಬಾ ಜನರಿಗೆ ಈ ಯೋಜನೆಯಿಂದ ಅನುಕೂಲ ಆಗಲಿದೆ. ಈ ಯೋಜನೆಯಿಂದ ತುಂಬಾ ಜನರು ಉದ್ಯೋಗ ಪಡೆದಿದ್ದಾರೆ ಎಂಬುದು ಈ ಯೋಜನೆಯಲ್ಲಿ ದುಡಿಯುತ್ತಿರುವ ಕಾರ್ಮಿಕರ ಮಾತಾಗಿದೆ.