ಚಿಕ್ಕಮಗಳೂರು: ಕಳೆದ 21 ತಲೆಮಾರು ಹಾಗೂ ಸುಮಾರು 500 ವರ್ಷಗಳಿಂದ ನಡೆದುಕೊಂಡು ಬಂದಿರುವ ಗ್ರಾಮೀಣ ಭಾಗದ ಸಂಪ್ರದಾಯವೊಂದು ಜಿಲ್ಲೆಯ ಕಳಸ ತಾಲೂಕಿನಲ್ಲಿ ಇಂದಿಗೂ ಜೀವಂತವಾಗಿದೆ. ಕಳಸ ತಾಲೂಕಿನ ಆದಿಶಕ್ತಿ ಅನ್ನಪೂರ್ಣೇಶ್ವರಿ ನೆಲೆಬೀಡಾಗಿರುವ ಹೊರನಾಡು ಗ್ರಾಮದಲ್ಲಿ ಈ ಸಂಪ್ರದಾಯ ತಲೆ ತಲಾಂತರಗಳಿಂದ ನಡೆದುಕೊಂಡು ಬಂದಿದ್ದು, ಇಂದಿಗೂ ನಡೆಯುತ್ತಿದೆ.
ಹೌದು, ಪ್ರತಿ ವರ್ಷ ಗದ್ದೆ ನಾಟಿ ಮಾಡುವ ಸಮಯದಲ್ಲಿ ಹೊರನಾಡು ಗ್ರಾಮದ ದೊಡ್ಡಮನೆ ರಾಜೇಂದ್ರ ಹೆಗ್ಗಡೆ ಎಂಬುವವರ ಮನೆಯ ಗದ್ದೆ ನಾಟಿ ಮಾಡಿದ ಬಳಿಕವೇ, ಊರಿನ ಉಳಿದ ಗದ್ದೆಗಳನ್ನು ನಾಟಿ ಮಾಡಲಾಗುವುದು. ದೊಡ್ಡಮನೆ ಗದ್ದೆಯ ನಾಟಿ ಮಾಡುವ ದಿನ ಗ್ರಾಮದ ಪ್ರತಿಯೊಂದು ಮನೆಯಿಂದಲೂ ಒಬ್ಬೊಬ್ಬರು ಹೋಗಿ ನಾಟಿ ಮಾಡುವ ಸಂಪ್ರದಾಯಕ್ಕೆ ಐದು ಶತಮಾನಗಳ ಇತಿಹಾಸವಿದೆ.
ಅಂದು ಪುರುಷರು-ಮಹಿಳೆಯರೆಂಬ ಭೇದ-ಭಾವವಿಲ್ಲದೆ ಎಲ್ಲರೂ ಗದ್ದೆಯನ್ನ ನಾಟಿ ಮಾಡುತ್ತಾರೆ. ಬಳಿಕ ಮರುದಿನದಿಂದ ಗ್ರಾಮದ ಬೇರೆ ಗದ್ದೆಗಳನ್ನು ನಾಟಿ ಮಾಡುತ್ತಾರೆ. ಈ ದೊಡ್ಡಮನೆ ಹೆಗ್ಗಡೆಯವರನ್ನು ಅನಾದಿ ಕಾಲದಿಂದ ಗ್ರಾಮದ ಜನ ಗೌರವಿಸಿಕೊಂಡು ಬಂದಿದ್ದಾರೆ. ಇವರನ್ನ ಪಾಳೇಗಾರರು, ಗೌಡರು, ಪಟೇಲರು ಎಂಬ ಮುಂತಾದ ಹೆಸರಿನಿಂದಲೂ ಕರೆಯುತ್ತಾರೆ.
ಇದನ್ನೂ ಓದಿ: ಸಿದ್ದರಾಮಯ್ಯ 75ನೇ ವರ್ಷದ ಹುಟ್ಟುಹಬ್ಬ: ಹಾರೈಕೆಯೊಂದಿಗೆ ಪ್ರಶ್ನೆ ಮಾಡಿದ ಸಿ.ಟಿ.ರವಿ
ಇಂದು ನಡೆದ ಈ ನಾಟಿ ಕಾರ್ಯಕ್ರಮದಲ್ಲಿ ಮೂಡಿಗೆರೆ ಶಾಸಕ ಕುಮಾರಸ್ವಾಮಿ ಕೂಡ ಭಾಗಿಯಾಗಿದ್ದರು. ನಾನು ಕಳೆದ ವರ್ಷ ಬರಲು ಸಾಧ್ಯವಾಗಿರಲಿಲ್ಲ. ಈ ವರ್ಷ ಬಂದಿದ್ದೇನೆ. ಈ ದಿನ ಗ್ರಾಮದ ಪ್ರತಿ ಮನೆಯಲ್ಲೂ ಹಬ್ಬದ ವಾತಾವರಣ ಏರ್ಪಟ್ಟಿರುತ್ತದೆ. ಭೂಮಿಯ ಅಂತರ್ಜಲ ಹೆಚ್ಚಲು ಹೆಚ್ಚು ಗದ್ದೆಗಳನ್ನ ನಾಟಿ ಮಾಡಬೇಕು. ಇಂತಹ ಕಾರ್ಯಕ್ರಮಕ್ಕೆ ಉತ್ತೇಜನ ನೀಡಲು ಈ ದಿನ ನಾನು ಗದ್ದೆಗಿಳಿದು ನಾಟಿ ಮಾಡಿದ್ದೇನೆ ಎಂದರು.