ಚಿಕ್ಕಮಗಳೂರು: ನಾಳೆ ಭಾರತ್ ಬಂದ್‍ಗೆ ಕರೆ ನೀಡಿರುವುದು ಅರ್ಥ ಹೀನ. ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ಕಾರ್ಮಿಕರ ಸಂಬಳ ಹೆಚ್ಚಳವಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಸಾರ್ವಜನಿಕರ ಆಸ್ತಿ ಪಾಸ್ತಿ ನಷ್ಟ ಮಾಡೋದು ಕಾರ್ಮಿಕರಿಗೆ ತೊಂದರೆ ಮಾಡೋದೇ ತುಕ್ಡೆ ತುಕ್ಡೆ ಗ್ಯಾಂಗ್‌ನ ಕಾಯಕ. ದೇಶದಲ್ಲಿ ಅಸ್ತಿತ್ವದಲ್ಲಿಲ್ಲದ ಸಿಪಿಐ-ಸಿಪಿಎಂನಿಂದ ಬಂದ್‍ಗೆ ಕರೆ ನೀಡಲಾಗಿದೆ. ಕಾರ್ಮಿಕರಿಗೆ ಇವರಷ್ಟು ಅನ್ಯಾಯ ಬೇರೆ ಯಾರೂ ಮಾಡಿಲ್ಲ ಎಂದು ಆರೋಪಿಸಿದರು.
ದೇಶದ ಕಾರ್ಖಾನೆಗಳು ಬಂದ್ ಆಗುವ ಹಂತ ತಲುಪಲು ಇವರೇ ಕಾರಣ. ಇವರಿಂದ ಸಾಕಷ್ಟು ಜನ ಕೆಲಸ ಕಳೆದುಕೊಂಡಿದ್ದಾರೆ. ದೇಶದ ಆರ್ಥಿಕ ಸ್ಥಿತಿ ಸ್ಥಗಿತ ಮಾಡೋದು ಇವರ ಉದ್ದೇಶ. ಇವರಿಗೆ ಸಾರ್ವಜನಿಕರು ಬೆಂಬಲ ಕೊಡಬಾರದು ಎಂದರು.
ಜೆಎನ್‍ಯು ವಿವಿ ಹಿಂಸಾಚಾರದ ಕುರಿತು ಪ್ರತಿಕ್ರಿಯಿಸಿ, ಯಾವ ದಳದವರು ಹಲ್ಲೆ ಮಾಡಿರೋದನ್ನು ಒಪ್ಪಿಕೊಂಡಿದ್ದಾರೋ ಗೊತ್ತಿಲ್ಲ. ದೇಶದ್ರೋಹಿ ಚಟುವಟಿಕೆ ಹಾಗೂ ಪಾಕ್‌ನ ಜಿಂದಾಬಾದ್ ಘೋಷಣೆ ಅಲ್ಲಿಂದ ಕೇಳುತ್ತಿವೆ. ಅಧ್ಯಯನ ಮುಗಿಸಿ 5 ವರ್ಷದಿಂದ ಅಲ್ಲೇ ಇದ್ದಾರೆಂಬ ಮಾಹಿತಿ ಇದೆ. ಜೆಎನ್‍ಯುನಲ್ಲಿರೋ ದೇಶದ್ರೋಹಿಗಳನ್ನು ದೆಹಲಿ ಸರ್ಕಾರ ಹೊರ ಹಾಕಬೇಕು ಎಂದರು. ಅವಧಿ ಮೀರಿ ಹಾಸ್ಟೆಲ್‍ನಲ್ಲಿ ಇರುವವರನ್ನು ಹೊರ ಹಾಕಬೇಕು ಎಂದರು.
ದೇಶದಲ್ಲಿ ಕಾಂಗ್ರೆಸ್ನವರು ನಿರುದ್ಯೋಗಿಗಳಾಗಿದ್ದಾರೆ. ಇನ್ಮೇಲೆ ಎಲ್ಲಾ ಕಾಂಗ್ರೆಸ್ನವರು ಪಕೋಡ ಮಾರಲಿ. ಹಾಗೆಂದು ನಾನು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ಹೇಳಿದರು. ಇವತ್ತು ಸಂಸದೆಗೆ ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ಆವರಣದಲ್ಲಿ ಮಹಿಳಾ ಕೈ ಕಾರ್ಯಕರ್ತೆಯರು ಪಕೋಡಾ ಮಾರಿ ಪ್ರತಿಭಟಿಸಿದ್ದರು. ಈ ಹಿನ್ನೆಲೆಯಲ್ಲಿ ಕರಂದ್ಲಾಜೆ ವ್ಯಂಗ್ಯವಾಡಿದರು.