ಚಿಕ್ಕಮಗಳೂರು : ಯಾರು ಯಾರಿಗೆ ಕಾಲಿಗೆ ಬಿದ್ದರು ಎಂಬುದು ನಮಗೆ ಸಂಬಂಧ ಪಡದ ವಿಚಾರ ಎಂದು ಚಿಕ್ಕಮಗಳೂರಿನಲ್ಲಿ ವಿಧಾನಪರಿಷತ್ ಸದಸ್ಯ ಎಸ್ ಎಲ್ ಭೋಜೇಗೌಡ ತಿಳಿದ್ದಾರೆ.
ಅದು ಡಿ ಕೆ ಶಿವಕುಮಾರ್ ಹಾಗೂ ಸಿ ಪಿ ಯೋಗೇಶ್ವರ್ ಅವರಿಗೆ ಸಂಬಂಧ ಪಡುವ ವಿಚಾರ. ಆದರೆ, ಹೆಚ್ ಡಿ ಕುಮಾರಸ್ವಾಮಿಯವರು ಮುಖ್ಯಮಂತ್ರಿ ಯಡಿಯೂರಪ್ಪನವರ ಬಳಿ ಕೆಲಸ ಮಾಡಿಸಿಕೊಳ್ಳುತ್ತಾರೆ. ಅವರ ಬಗ್ಗೆ ಮೃದು ಸ್ವಭಾವ ಹೊಂದಿದ್ದಾರೆ ಎಂಬುದು ಸರಿಯಲ್ಲ. ನಾವು ಮುಖ್ಯಮಂತ್ರಿಯ ಬಳಿ ಕೆಲಸ ಮಾಡಿಸಿಕೊಳ್ಳದೇ ಇನ್ಯಾರ ಬಳಿ ಮಾಡಿಸಿಕೊಳ್ಳಬೇಕು. ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಬೆಳಗ್ಗೆ ಆದರೂ ಹೋಗಲಿ, ರಾತ್ರಿಯಾದರೂ ಹೋಗಲಿ, ಮುಖ್ಯ ಮಂತ್ರಿಗಳನ್ನು ಭೇಟಿಯಾಗಲು ಸಾಮಾನ್ಯ ಪ್ರಜೆಗಳಿಗೂ ಹಾಗೂ ಜನ ಪ್ರತಿನಿಧಿಗಳಿಗೆ ಹಕ್ಕಿದೆ. ರಾಜ್ಯದ ಸಮಸ್ಯೆ ಕುರಿತು ಕುಮಾರಸ್ವಾಮಿಯವರು ಅವರ ಬಳಿ ಮಾತನಾಡಿದರೆ ತಪ್ಪೇನಿದೆ ಎಂದು ಅವರು ಪ್ರಶ್ನಿಸಿದರು.
ಎರಡು ಸಾವಿರ ಕೋಟಿ ಹಗರಣ ಮಾಡಿದ್ದೀರಿ ಎಂದು ಕಾಂಗ್ರೆಸ್ನವರು ಆರೋಪ ಮಾಡುತ್ತಿದ್ದಾರೆ. ನೀವು ಅದಕ್ಕೆ ತಕ್ಕ ದಾಖಲೆಗಳನ್ನು ನೀಡಿ. ಯೋಗೇಶ್ವರ್ ಅವರು ಆಂತರಿಕ ರಾಜಕೀಯ ಮಾಡುತ್ತಿರಬಹುದು. ಈ ಮೂಲಕ ಬೇರೆ ಕಾರ್ಯಕರ್ತರ ಮನವೊಲಿಕೆ ಮಾಡುವ ಪ್ರಯತ್ನ ನಡೆದಿರಬಹುದು. ಕಾಂಗ್ರೆಸ್ ಪಕ್ಷದವರು ನೇರವಾಗಿ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ.
ಆದರೆ, ರವಿಕುಮಾರ್ ಅವರು ನೋಟಿಸ್ ನೀಡಿರುವುದು ಸರಿಯಲ್ಲ. ರವಿಕುಮಾರ್ ಸರ್ಕಾರವಲ್ಲ. ಅವರು ಕೇವಲ ಕೌನ್ಸಿಲ್ ಸದಸ್ಯ. ರವಿಕುಮಾರ್ ಅವರು ನೋಟಿಸ್ ನೀಡಿರುವುದೇ ತಪ್ಪು, ಅದಕ್ಕೆ ಉತ್ತರ ಕೊಡುವ ಅವಶ್ಯಕತೆಯೂ ಇಲ್ಲ ಎಂದು ಚಿಕ್ಕಮಗಳೂರಿನಲ್ಲಿ ವಿಧಾನಪರಿಷತ್ ಸದಸ್ಯ ಎಸ್ ಎಲ್ ಭೋಜೇಗೌಡ ಹೇಳಿದರು.