ಚಿಕ್ಕಮಗಳೂರು : ನೈಟ್ ಕರ್ಫ್ಯೂ ಬಗ್ಗೆ ಸಚಿವ ಈಶ್ವರಪ್ಪ ಹೇಳಿಕೆಗೆ ಸಚಿವ ವಿ. ಸೋಮಣ್ಣ ಪ್ರತಿಕ್ರಿಯಿಸಿದ್ದಾರೆ. ಮಾಧ್ಯಮಗಳಿಗೆ ಈಶ್ವರಪ್ಪ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈಶ್ವರಪ್ಪನವರು ಬಿಡಿ ಅವರು ಈಶ್ವರ. ಅವರು ಒಂದೊಂದು ಬಾರಿ ಒಂದೊಂದು ರೀತಿ ಇರುತ್ತಾರೆ. ಈಶ್ವರಪ್ಪನವರು ಹಿರಿಯರು ಎಂದು ಸಚಿವ ಸೋಮಣ್ಣ ನಸುನಕ್ಕರು.
ವೀಕೆಂಡ್ ಕರ್ಫ್ಯೂ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆಯೇ ಆಗಿಲ್ಲ. ನಾನೂ ಬೆಂಗಳೂರಿನವನೇ ಪರಿಸ್ಥಿತಿ ಅವಲೋಕಿಸಬೇಕು. ಉದಾಸಿನ ಮಾಡಿದ್ದರಿಂದ 2ನೇ ಅಲೆಯಲ್ಲಿ ಏನಾಯ್ತು, ಎಂತೆಂಥವರನ್ನ ಕಳ್ಕೊಂಡ್ವಿ. ಕೇಂದ್ರ ಹಾಗೂ ತಾಂತ್ರಿಕ ತಜ್ಞರ ಸೂಚನೆಯಂತೆ ಮುಖ್ಯಮಂತ್ರಿ ಕ್ರಮಕೈಗೊಂಡಿದ್ದಾರೆ ಎಂದರು.
ಓದಿ: ಮೇಕೆದಾಟು ಪಾದಯಾತ್ರೆ ಪ್ರಾರಂಭಿಸುವ ಮುನ್ನ ಮನೆ ದೇವರಿಗೆ ಪೂಜೆ ಸಲ್ಲಿಸಿದ ಡಿಕೆಶಿ ಕುಟುಂಬ
ನಮಗೆ ಎಲ್ಲಕ್ಕಿಂತ ದೊಡ್ಡದು ಆರೋಗ್ಯ, ಮತ್ತೊಬ್ಬರ ಜೀವ. ಜೀವದ ಜೊತೆ ಸರಸ ಹಾಗೂ ಉದಾಸೀನ ಮಾಡೋದು ಬೇಡ. ಸರ್ಕಾರ ಕಠಿಣ ನಿಲುವು ತೆಗೆದುಕೊಂಡಿದೆ. ಜನ ಸರ್ಕಾರದ ಜೊತೆ ಸಹಕರಿಸಬೇಕು ಎಂದು ಚಿಕ್ಕಮಗಳೂರಿನಲ್ಲಿ ಸಚಿವ ವಿ ಸೋಮಣ್ಣ ಮನವಿ ಮಾಡಿದರು.
ಮೇಕೆದಾಟು ಯೋಜನೆಗೆ ಕಾಂಗ್ರೆಸ್ ಪಾದಯಾತ್ರೆ ವಿಚಾರ ಸಂಬಂಧಪಟ್ಟಂತೆ ವಸತಿ ಸಚಿವ ವಿ. ಸೋಮಣ್ಣ ಪ್ರತಿಕ್ರಿಯಿಸಿ, ಜೈಲಿಗೆ ಹೋಗುವಂತಹ ಕೆಲಸ ಅವರಿಗೆ ಆಗೋದು ಬೇಡ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ನಮ್ಮ ದೇಶಕ್ಕೆ ನಮ್ದೆ ಕಾನೂನಿದೆ.
ಕಾನೂನನ್ನ ಹೇಗೆ ಪರಿಪಾಲನೆ ಮಾಡಬೇಕೆಂದು ಅವರಿಗೂ ಗೊತ್ತಿದೆ. ಯಾವ ಕಾಲಕ್ಕೆ ಏನು ಆಗಬೇಕೋ ಅದು ಆಗುತ್ತೆ. ನಮ್ಮ ಇತಿಮಿತಿಯಲ್ಲಿ ಹೆಜ್ಜೆ ಹಾಕಬೇಕು. ಚಿಕ್ಕಮಗಳೂರಲ್ಲಿ ಬಿಜೆಪಿ ಸುಭದ್ರವಾಗಿದೆ. ಯಾರೂ ಬರುವ ಅಗತ್ಯ-ಅವಶ್ಯಕತೆ ಎರಡೂ ಇಲ್ಲ ಎಂದು ಹೇಳಿದರು.