ಚಿಕ್ಕಮಗಳೂರು: ನಗರದ ಹೊರ ವಲಯದಲ್ಲಿ ಜಿಲ್ಲಾ ಪಂಚಾಯತ್ ಮುಂಭಾಗದ ರಸ್ತೆಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡಕ್ಕೆ ಕಂದಾಯ ಸಚಿವ ಆರ್.ಅಶೋಕ್ ಭೇಟಿ ನೀಡಿ ಪರಿಶೀಲಿಸಿದರು.
ನಂತರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸಚಿವರು, ಜಿಲ್ಲಾಧಿಕಾರಿ ಕಚೇರಿ ಕಟ್ಟಡ ಕಾಮಗಾರಿ ತುಂಬಾ ದಿನಗಳಿಂದ ಕುಂಠಿತವಾಗಿದೆ. 25 ಕೋಟಿ ರೂ. ವೆಚ್ಚದಲ್ಲಿ ಈ ಕಟ್ಟಡ ನಿರ್ಮಾಣಕ್ಕೆ ನೀಲನಕ್ಷೆ ತಯಾರು ಮಾಡಲಾಗಿದೆ. ಈಗಾಗಲೇ ಕಟ್ಟಡಕ್ಕಾಗಿ 5 ಕೋಟಿ ವೆಚ್ಚ ಮಾಡಲಾಗಿದೆ. ಈ ಕಚೇರಿಯನ್ನು ಇಲ್ಲೇ ನಿರ್ಮಾಣ ಮಾಡಬೇಕಾ ಅಥವಾ ನಗರದ ಬೇರೆ ಭಾಗದಲ್ಲಿ ನಿರ್ಮಾಣ ಮಾಡಬೇಕಾ ಎಂಬುದರ ಕುರಿತು ಚರ್ಚೆ ಮಾಡಲಾಗುವುದು. ನಗರದಲ್ಲಿ ಬೇರೆ ಸ್ಥಳಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡುತ್ತೇನೆ ಎಂದರು.
ಈ ಕಟ್ಟಡ ನಿರ್ಮಾಣವಾಗಿ, ನಮ್ಮ ಸರ್ಕಾರದ ಅವಧಿಯಲ್ಲಿಯೇ ಪ್ರಾರಂಭವಾಗಬೇಕು. ಈ ದಿನ ನನ್ನ ಹುಟ್ಟುಹಬ್ಬ, ದೇಶ ಹಾಗೂ ರಾಜ್ಯದಲ್ಲಿ ಕೊರೊನಾ ವೈರಸ್ ಬಂದಿರುವುದರಿಂದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಆದರೆ ಚಿಕ್ಕಮಗಳೂರಿನಲ್ಲಿರುವ ಶ್ರೀರಾಮನ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದೇನೆ ಎಂದು ಸಚಿವ ಆರ್ ಅಶೋಕ್ ತಿಳಿಸಿದರು.