ಚಿಕ್ಕಮಗಳೂರು: ಆಸ್ಟ್ರೇಲಿಯಾದಲ್ಲಿರುವ ಕನ್ನಡಿಗರನ್ನು ವಿಶೇಷ ವಿಮಾನಗಳ ಮೂಲಕ ಹಂತ-ಹಂತವಾಗಿ ಸ್ವದೇಶಕ್ಕೆ ಕರೆ ತರಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ. ಟಿ. ರವಿ ಹೇಳಿದ್ದಾರೆ.
ಸಚಿವರು ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಕನ್ನಡಿಗರೊಂದಿಗೆ ಸ್ಕೈಪ್ ಆ್ಯಪ್ ಮೂಲಕ ವಿಡಿಯೋ ಸಂವಾದದಲ್ಲಿ ಮಾತನಾಡಿದ್ದು, ಆಸ್ಟ್ರೇಲಿಯಾಕ್ಕೆ ಉದ್ಯೋಗ ಅರಸಿ, ಪ್ರವಾಸಕ್ಕೆ ಹೋದವರು ಹಾಗೂ ಉನ್ನತ ವ್ಯಾಸಂಗಕ್ಕೆ ಹೋದ ವಿದ್ಯಾರ್ಥಿಗಳೊಂದಿಗೆ ಕೊರೊನಾ ಹಾವಳಿಯಿಂದ ಬಚಾವಾಗುವುದು ಹೇಗೆ ಎಂಬ ಬಗ್ಗೆ ಹಾಗೂ ಕನ್ನಡ ಭಾಷೆ ಅಭಿವೃದ್ಧಿ ಕುರಿತು ಚರ್ಚಿಸಿದರು.
ಸಾವಿರಾರು ಕಿ. ಮೀ ದೂರದ ದ್ವೀಪ ಪ್ರದೇಶ ಆಸ್ಟ್ರೇಲಿಯಾದಲ್ಲಿರುವ 1500ಕ್ಕೂ ಹೆಚ್ಚು ಕನ್ನಡಿಗರು ಸ್ವದೇಶಕ್ಕೆ ಮರಳಲು ಅರ್ಜಿ ಸಲ್ಲಿಸಿ ನೋಂದಣಿ ಮಾಡಿಕೊಂಡಿದ್ದಾರೆ. ಈಗಾಗಲೇ ವಿದೇಶದಲ್ಲಿರುವ ಭಾರತೀಯರನ್ನು ವಾಪಸ್ ಕರೆ ತರುವ ಕಾರ್ಯಾಚರಣೆಯು ಆರಂಭವಾಗಿದ್ದು, ಇವರನ್ನು ಸಹ ಹಂತ-ಹಂತವಾಗಿ ದೇಶಕ್ಕೆ ಕರೆತರಲಾಗುವುದು.
ಆಸ್ಟ್ರೇಲಿಯದಲ್ಲಿರುವ ನಮ್ಮ ದೇಶದ ರಾಯಭಾರಿ ಕಚೇರಿಗಳು ಈ ಹಿಂದೆ ಕಾರ್ಯ ನಿರ್ವಹಿಸುವುದಕ್ಕಿಂತ ಇನ್ನೂ ಉತ್ತಮವಾಗಿ ಕೆಲಸ ಮಾಡುವುದರೊಂದಿಗೆ ಭಾರತೀಯರ ಆಗು-ಹೋಗುಗಳಿಗೆ ಸ್ಪಂದಿಸುತ್ತಿವೆ. ಇದರ ಜೊತೆಗೆ 40 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಕನ್ನಡ ಸಂಘವು ಈ ಕಾರ್ಯಕ್ಕೆ ಕೈ ಜೋಡಿಸಿದೆ. ಖಾಲಿ ಇರುವ ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷ ಸ್ಥಾನಕ್ಕೆ ಸೂಕ್ತ ವ್ಯಕ್ತಿ ನೇಮಿಸಲು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು.
ಆಸ್ಟ್ರೇಲಿಯಾದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಇಲ್ಲಿನ ಕಲಾವಿದರನ್ನು ಕಳುಹಿಸಬೇಕು. ಜೊತೆಗೆ ಇಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತಮ್ಮನ್ನು ಆಹ್ವಾನಿಸಬೇಕು ಎನ್ನುವ ಕೋರಿಕೆಗೆ ಸ್ಪಂದಿಸುವುದಾಗಿ ಸಚಿವರು ತಿಳಿಸಿದರು. ಅಲ್ಲಿಯೂ ಕರ್ನಾಟಕವನ್ನು ಬ್ರ್ಯಾಂಡ್ ಆಗಿ ರೂಪಿಸುವ ಕಾರ್ಯ ಕನ್ನಡಿಗರ ಮೇಲಿದೆ ಎಂದರು.
ರಾಜ್ಯದಲ್ಲಿ ಕೋವಿಡ್- 19 ನಿಂದಾಗಿ ಪ್ರವಾಸೋದ್ಯಮಕ್ಕೆ ಹಿನ್ನಡೆಯಾಗಿದ್ದು, ಇದನ್ನು ಉತ್ತೇಜಿಸಲು ಜನರ ಮನೋಭಾವನೆಯನ್ನು ಬದಲಾಯಿಸಬೇಕು. ಸ್ಥಳೀಯರ ಪ್ರವಾಸ, ಅಂತರ್ ಜಿಲ್ಲಾ ಪ್ರವಾಸವನ್ನು ಹಂತ-ಹಂತವಾಗಿ ಚುರುಕುಗೊಳಿಸುವುದರೊಂದಿಗೆ ಅಂತಾರಾಷ್ಟ್ರೀಯ ಪ್ರವಾಸಿಗರನ್ನು ತಮ್ಮತ್ತ ಸೆಳೆಯಲು ಕಾರ್ಯ ಯೋಜನೆಗಳನ್ನು ಹಾಕಿಕೊಂಡಿರುವುದಾಗಿ ತಿಳಿಸಿದರು. ಜೊತೆಗೆ, ಸಂವಾದದಲ್ಲಿ ವಿದೇಶಿ ಕನ್ನಡಿಗರ ಅಹವಾಲುಗಳನ್ನು ಆಲಿಸಿದ ಸಚಿವ ಸಿ. ಟಿ. ರವಿ ಸಮಸ್ಯೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಗಮನಕ್ಕೆ ತಂದು ನೆರವಾಗುವುದಾಗಿ ಭರವಸೆ ನೀಡಿದರು.