ಚಿಕ್ಕಮಗಳೂರು: ಜಿಲ್ಲೆಯಲ್ಲಿನ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಮೂಲಭೂತ ಸೌಕರ್ಯ ಒಳಗೊಂಡ ಸುಸಜ್ಜಿತವಾದ ಆಸ್ಪತ್ರೆಯನ್ನು ಮುಂದಿನ 3 ವರ್ಷದ ಒಳಗಾಗಿ ಪೂರ್ಣಗೊಳಿಸಿ ಜಿಲ್ಲೆಯ ಜನತೆಗೆ ಅನುಕೂಲ ಮಾಡಿಕೊಡಲು ಶ್ರಮಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಹೇಳಿದ್ದಾರೆ.
ಚಿಕ್ಕಮಗಳೂರು ತಾಲೂಕು ಕರಿಸಿದ್ದನಹಳ್ಳಿ ಗ್ರಾಮದಲ್ಲಿ 40 ಲಕ್ಷ ವೆಚ್ಚದ ರಸ್ತೆ ಕಾಮಗಾರಿಯ ಭೂಮಿ ಪೂಜೆ ಮತ್ತು ಶಾಲಾ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕರಿ ಸಿದ್ದನಹಳ್ಳಿ ಗ್ರಾಮದಲ್ಲಿ ರಸ್ತೆ ನಿರ್ಮಾಣ ಮಾಡಬೇಕೆಂಬುದು ಇಲ್ಲಿನ ಜನರ ಬಹು ದಿನದ ಬೇಡಿಕೆಯಾಗಿತ್ತು. ಅದರಂತೆ ಇಂದು 40 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ ಎಂದರು.
ಸದ್ಯ ಈ ಗ್ರಾಮದ ಒಳಗೆ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ 15 ಲಕ್ಷ ಅನುದಾನ ಹಾಗೂ ಕೆಂಗೇನಹಳ್ಳಿ ಮುಖ್ಯ ರಸ್ತೆಗೆ 20 ಲಕ್ಷ, ದೇವಸ್ಥಾನಕ್ಕೆ 3 ಲಕ್ಷ ಅನುದಾನ ಒದಗಿಸಲಾಗಿದೆ.
ಜಿಲ್ಲೆಯಲ್ಲಿ ವೈದ್ಯಕೀಯ ಮಹಾವಿದ್ಯಾಲಯ ನಿರ್ಮಾಣ ಮಾಡುವುದು ಬಹು ದಿನಗಳ ಕನಸು. ಅದರಂತೆ ಒಟ್ಟು 600 ಕೋಟಿ ವೆಚ್ಚದಲ್ಲಿ ಮಹಾವಿದ್ಯಾಲಯ ಹಾಗೂ ಮೂಲಭೂತ ಸೌಕರ್ಯ ಒಳಗೊಂಡ ಸುಸಜ್ಜಿತ ಆಸ್ಪತ್ರೆ ನಿಮಾರ್ಣ ಕಾರ್ಯವನ್ನು ಮುಂದಿನ 3 ವರ್ಷದೊಳಗೆ ಪೂರೈಸಲು ಶ್ರಮಿಸಲಾಗುವುದು ಎಂದರು. ಸದ್ಯ ಇದರ ಟೆಂಡರ್ ಪ್ರಕ್ರಿಯೆಗಳು ಆರಂಭವಾಗಬೇಕಿದ್ದು, ಮುಂದಿನ ಕಾರ್ತಿಕ ಮಾಸದೊಳಗಾಗಿ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದಿದ್ದಾರೆ.