ಚಿಕ್ಕಮಗಳೂರು : ಕಾಫಿನಾಡಿನಲ್ಲಿ ಇಪ್ಪತ್ತರ ಹರೆಯದ ಯುವಕನೊಬ್ಬ ಮೀಟರ್ ಬಡ್ಡಿದಂಧೆಗೆ ಬಲಿಯಾಗಿದ್ದಾನೆ. ಮೃತಪಟ್ಟ ಯುವಕನನ್ನು ಧೃವರಾಜ್ ಅರಸ್ ಎಂದು ಗುರುತಿಸಲಾಗಿದೆ. ಚಿಕ್ಕಮಗಳೂರು ನಗರದ ಗವನಹಳ್ಳಿಯ ಧೃವರಾಜ್ ಅರಸ್ ರೈತನಾಗಿದ್ದು, ಜೊತೆಗೆ ಕಾಫಿ ಕ್ಯೂರಿಂಗ್‍ನಲ್ಲಿ ಕೆಲಸ ಮಾಡುತ್ತಿದ್ದ.
ಧೃವರಾಜ್, ವಸ್ತಾರೆ ಗ್ರಾಮದ ಪ್ರಮೋದ್ ಎಂಬುವನ ಬಳಿ ಒಂದೂವರೆ ಲಕ್ಷ ಹಣ ಪಡೆದುಕೊಂಡಿದ್ದ. ಇದಕ್ಕೆ 20 ಪರ್ಸೆಂಟ್ ಬಡ್ಡಿ ಪಾವತಿಸುವ ಬಗ್ಗೆ ಇವರ ನಡುವೆ ಒಪ್ಪಂದ ನಡೆದಿತ್ತು. ಅಂತೆಯೇ ಧೃವರಾಜ್ ವರ್ಷದಿಂದ ಬಡ್ಡಿಯನ್ನೂ ಕಟ್ಟುತ್ತಿದ್ದ. ಆದರೆ, ಕಳೆದೆರಡು ತಿಂಗಳಿಂದ ಬಡ್ಡಿ ಕಟ್ಟಲು ಸಾಧ್ಯವಾಗಿಲ್ಲ. ಇದರಿಂದ ಪ್ರಮೋದ್ ಹಾಗೂ ಆತನ ಅಣ್ಣ ಇಬ್ಬರೂ ಬಡ್ಡಿಹಣ ಕೊಡುವಂತೆ ಧೃವರಾಜ್‌ಗೆ ಒತ್ತಾಯಿಸುತ್ತಿದ್ದರು. ಈ ಬಗ್ಗೆ ಧೃವರಾಜ್ ಪೋಷಕರೂ ಗಲಾಟೆ ಮಾಡಿಕೊಳ್ಳಬೇಡಿ. ಹಣ ಕೊಡುವುದಾಗಿ ಹೇಳಿದ್ದರು.
ನಿನ್ನೆ ಪ್ರಮೋದ್, ಧೃವರಾಜ್‌ಗೆ ಹಲವು ಬಾರಿ ಕರೆ ಮಾಡಿದ್ದಾನೆ. ಸಂಜೆ ವೇಳೆಗೆ ಕಾಫಿ ಕ್ಯೂರಿಂಗ್‍ನಲ್ಲಿದ್ದವನನ್ನು ಮಾತುಕತೆಗೆ ಕರೆಸಿಕೊಂಡಿದ್ದಾನೆ. ಈ ವೇಳೆ, ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಸಿಟ್ಟಿಗೆದ್ದ ಪ್ರಮೋದ್ ಚಾಕುವಿನಿಂದ ಧೃವರಾಜ್‌ಗೆ ಇರಿದು ಸ್ನೇಹಿತರ ಜೊತೆಗೆ ಪರಾರಿಯಾಗಿದ್ದಾನೆ. ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಧೃವರಾಜ್ ಅರಸ್ ಅದಾಗಲೇ ಕೊನೆಯುಸಿರೆಳೆದಿದ್ದಾನೆ.
ಇವರ ಗಲಾಟೆಯ ದೃಶ್ಯ ಪಕ್ಕದ ಮನೆಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಕೂಡಲೇ ಕಾರ್ಯ ಪ್ರವೃತರಾದ ನಗರ ಪೊಲೀಸರು ನಾಪತ್ತೆಯಾಗಿದ್ದ ಪ್ರಮೋದ್‍ನನ್ನು ಬಂಧಿಸಿದ್ದಾರೆ. ಜೊತೆಗಿದ್ದ ಮತ್ತಿಬ್ಬರು ಆರೋಪಿಗಳಿಗೆ ಬಲೆ ಬೀಸಿದ್ದಾರೆ.
ಓದಿ : ಕೆಲಸದಿಂದ ವಜಾಗೊಳಿಸಿದ ಖಾಸಗಿ ಕಂಪನಿ.. ಮನನೊಂದು ಯುವಕ ಆತ್ಮಹತ್ಯೆ