ಚಿಕ್ಕಮಗಳೂರು: ಗಡಿ ವಿಚಾರವನ್ನು ರಾಜಕೀಯದ ಬೇಳೆ ಬೇಯಿಸಿಕೊಳ್ಳಲು ಬಳಸುವುದು ಬಹಳ ಹಿಂದಿನಿಂದ ಬಂದಿದೆ. ಕನ್ನಡ ಮಾತನಾಡುವವರು ಮಹಾರಾಷ್ಟ್ರ ಗಡಿಯೊಳಗೆ ಇದ್ದಾರೆ. ಮಠಾಠಿ ಮಾತನಾಡುವವರು ಕರ್ನಾಟಕದಲ್ಲಿದ್ದಾರೆ. ಇದಕ್ಕೆ ಸಂಬಂಧಿಸಿದ್ದಂತೆ ಹಲವು ಅಯೋಗಗಳು ಬಂದಿವೆ. ಭಾಷಾವಾರು ಪ್ರಾಂತ್ಯವಾಗುವಾಗ ಕ್ಷೇತ್ರ ವಿಂಗಡಣೆಯಾಗಿದೆ. ಅವರ ಸಾಂಪ್ರದಾಯಿಕ ಅಸ್ಮಿತೆಯನ್ನು ಉಳಿಸುವ ಕೆಲಸವನ್ನು ಭಾರತೀಯರು ಮಾಡಿಕೊಂಡು ಬಂದಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿದ್ದಾರೆ.
ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ತೆಗೆದಿರುವ ಗಡಿ ಕ್ಯಾತೆ ಕುರಿತು ಪ್ರತಿಕ್ರಿಯಿಸಿದ ಅವರು, ಭಾಷಾವಾರು ಪ್ರಾಂತ್ಯ ರಚನೆಯಾಗಬೇಕಾದರೆ ಬಿಜೆಪಿ ಅಸ್ತಿತ್ವದಲ್ಲಿರಲಿಲ್ಲ. ಅಂದು ದೇಶಾದ್ಯಂತ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಉದ್ಧವ್ ಠಾಕ್ರೆ ಅವರನ್ನು ಆ ರಾಜ್ಯದಲ್ಲಿ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ನವರು ಪ್ರಶ್ನಿಸಬೇಕು ಎಂದರು.
ಇದೇ ವೇಳೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರದ್ದು ಜಿನ್ನಾವಾದ ಆಗುತ್ತೆ, ಗಾಂಧೀವಾದ ಆಗಲ್ಲ ಎಂದು ಸಿ.ಟಿ. ರವಿ ತಿರುಗೇಟು ನೀಡಿದ್ದಾರೆ.
ಒಮ್ಮೆ ನಾನೂ ಹಿಂದೂ ಅಂತಾರೆ, ಆಮೇಲೆ ನನಗೂ ಹಿಂದೂಗೂ ಸಂಬಂಧವಿಲ್ಲ ಅಂತಾರೆ. ಒಮ್ಮೊಮ್ಮೆ ನಂದು ಗಾಂಧಿ ಹಿಂದುತ್ವ ಅಂತಾರೆ. ಗಾಂಧಿ ದನದ ಮಾಂಸ ತಿನ್ನಿ ಅಂತ ಹೇಳಿದ್ರಾ?, ಗಾಂಧಿ ಗೋ ಹತ್ಯೆ ನಿಷೇಧ ಬಯಸಿದವರು. ಗೋ ಮಾಂಸ ತಿನ್ನುತ್ತೇವೆ ಎನ್ನುವವರದ್ದು ಗಾಂಧಿ ಹಿಂದೂತ್ವ ಹೇಗಾಗುತ್ತದೆ?. ಸಿದ್ದರಾಮಯ್ಯ ಯಾವಾಗ ಆರ್ಎಸ್ಎಸ್ಗೆ ಬಂದ್ರು ಗೊತ್ತಿಲ್ಲ. ಆರ್ಎಸ್ಎಸ್ ಮೂಲ ತಿಳಿಯ ಬೇಕಂದ್ರೆ ಇಲ್ಲಿಗೆ ಬರಬೇಕು. ಮೊದಲು ಆರ್ಎಸ್ಎಸ್ಗೆ ಬರಲಿ. ಆಮೇಲೆ ಮೂಲ ತಿಳಿಯಲಿ ಎಂದು ಸಿ ಟಿ ರವಿ ಹೇಳಿದರು.
ಓದಿ: ಉದ್ಧವ್ ಠಾಕ್ರೆ ಹೇಳಿಕೆ ಚೀನಾದ ವಿಸ್ತರಣಾವಾದವನ್ನು ಧ್ವನಿಸುತ್ತಿದೆ: ಹೆಚ್ಡಿಕೆ
'ಮಹಾಜನ್ ವರದಿಯೇ ಅಂತಿಮ ಎಂದ ಮಾಧುಸ್ವಾಮಿ: ಮಹಾಜನ್ ವರದಿಯೇ ಅಂತಿಮ. ಇದರಿಂದ ರಾಜಿಯಾಗುವ ಪ್ರಶ್ನೆ ಇಲ್ಲ ಎಂದು ಚಿಕ್ಕಮಗಳೂರಿನಲ್ಲಿ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದ್ದಾರೆ. ಯಾವುದೇ ಕಾನೂನು ರಾಜ್ಯಗಳನ್ನ ಭಾಷಾವಾರು ಮರು ವಿಂಗಡನೆ ಬಗ್ಗೆ ಹೇಳಿಲ್ಲ. ಎರಡೆರಡು ಬಾರಿ ದೇಶವನ್ನು ವಿಂಗಡಣೆ ಮಾಡಲು ಸಾಧ್ಯವಿಲ್ಲ. ಇದು ಮುಗಿದ ಅಧ್ಯಾಯ. ಮಹಾಜನ್ ವರದಿಯನ್ನ ಎಲ್ಲರೂ ಒಪ್ಪಿಯಾಗಿದೆ. ರಾಜಕೀಯ ಅಸ್ತಿತ್ವಕ್ಕಾಗಿ ಬದುಕಲು ಈ ರೀತಿ ಉದ್ಧವ್ ಹೇಳಿಕೆ ನೀಡುತ್ತಿದ್ದಾರೆ ಎಂದರು.