ಚಿಕ್ಕಮಗಳೂರು: ಇಲ್ಲಿನ ಅರಣ್ಯ ಇಲಾಖೆಯ ಆನೆ ಹಿಮ್ಮೆಟ್ಟಿಸುವ ಶಿಬಿರದ ಶೌಚಾಲಯದಲ್ಲಿ ವ್ಯಕ್ತಿಯೋರ್ವನ ಮೃತದೇಹ ದೊರೆತಿದ್ದು, ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಲಾಕಪ್ ಡೆತ್ ಆರೋಪ ಕೇಳಿಬಂದಿದೆ. ಶಿವಮೊಗ್ಗ ಮೂಲದ ರವಿ(40) ಎಂಬಾತನೆ ಮೃತ ವ್ಯಕ್ತಿ.
ಚಿಕ್ಕಮಗಳೂರು ತಾಲೂಕಿನ ಹೊಸಪೇಟೆ ಗ್ರಾಮದ ಬಳಿಯಿರುವ ಅರಣ್ಯ ಇಲಾಖೆಯ ಕಲ್ಲೋಳ ಕೋಟೆಯ ಶಿಬಿರದ ಶೌಚಾಲಯದಲ್ಲಿ ಮೃತದೇಹ ಕಂಡುಬಂದಿದೆ. ಫಾರೆಸ್ಟ್ ಕ್ವಾಟ್ರಸ್‌ನಲ್ಲಿ ಲಾಕಪ್ ಡೆತ್ ಆದ ಬಳಿಕ ಶವವನ್ನು ಇಲ್ಲಿಗೆ ತಂದು ಹಾಕಿರುವ ಆರೋಪವಿದೆ. ಈ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ರಾತ್ರಿ ಗಂಧದ ಮರ ಕದಿಯಲು ಬಂದಿದ್ದ ಇಬ್ಬರನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ. ಪ್ರಕರಣ ಸಂಬಂಧ ಸ್ಥಳೀಯರು ಅರಣ್ಯಾಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದು, ಈ ಸಂದರ್ಭ ಅರಣ್ಯಾಧಿಕಾರಿಗಳು ಹಾಗೂ ಸ್ಥಳೀಯರ ನಡುವೆ ಮಾತಿನ ಚಕಮಕಿಯೂ ನಡೆದಿದೆ. ಸ್ಥಳಕ್ಕೆ ಸಖರಾಯಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ : ಸ್ಪೋರ್ಟ್ಸ್ ಬ್ರಾದಲ್ಲಿ ಬಚ್ಚಿಟ್ಟು ಅಕ್ರಮ ಚಿನ್ನ ಸಾಗಾಟ: ಕಸ್ಟಮ್ಸ್ ಬಲೆಗೆ ಬಿದ್ದ ಮಹಿಳೆ