ಚಿಕ್ಕಮಗಳೂರು: ಕೊರೊನಾ ವೈರಸ್ ಭೀತಿಯಿಂದ, ಈಗಾಗಲೇ ಭಾರತ ದೇಶವೇ ಲಾಕ್ಡೌನ್ ಆಗಿದೆ. ಇದರ ನಡುವೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪರಿಸ್ಥಿತಿ ಅರಿಯಲು ಕೃಷಿ ಸಚಿವ ಬಿ.ಸಿ.ಪಾಟೀಲ್ ಜಿಲ್ಲೆಗೆ ಭೇಟಿ ನೀಡಿದ್ದರು.
ನಂತರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅಧಿಕಾರಿಗಳು, ಶಾಸಕರ ಜೊತೆ ಈ ಕುರಿತು ಚರ್ಚೆ ನಡೆಸಿದರು. ಈ ವೇಳೆ ಮಾತನಾಡಿದ ಕೃಷಿ ಸಚಿವ ಬಿ ಸಿ ಪಾಟೀಲ್, ಕೃಷಿಕರಿಗೆ ಹಾಗೂ ಗ್ರಾಹಕರಿಗೆ ಆಗುತ್ತಿರುವ ತೊಂದರೆ ಕಂಡು ಭಾರತ ಸರ್ಕಾರ ಯಾವುದೇ ಕಾರಣಕ್ಕೂ ಕೃಷಿ ಚಟುವಟಿಕೆಗಳನ್ನು ನಿಲ್ಲಿಸಬಾರದು ಎಂದು ಆದೇಶ ಮಾಡಿದೆ. ರೈತರು ಬೆಳೆದ ಬೆಳೆಗಳು ನೇರವಾಗಿ ಮಾರುಕಟ್ಟೆಗೆ ಬರಬೇಕು ಎಂಬ ಉದ್ದೇಶದಿಂದ ಈ ಸುತ್ತೋಲೆಯನ್ನು ಹೊರಡಿಸಲಾಗಿದ್ದು, ರೈತರು ಬೆಳೆದ ತರಕಾರಿ, ಹಣ್ಣು, ಪದಾರ್ಥಗಳನ್ನು ಸಾಗಿಸಲು ಯಾವುದೇ ತೊಂದರೆ ಆಗಬಾರದು ಎಂದು ಆದೇಶ ಮಾಡಲಾಗಿದೆ.
ಜಿಲ್ಲೆಯಲ್ಲಿ ಲಾಕ್ಡೌನ್ ಬಹುತೇಕ ಬಹುತೇಕ ಯಶಸ್ವಿಯಾಗಿದೆ. ಆದರೆ, ಕೆಲವರು ಈ ಮಧ್ಯೆ ಜಿಲ್ಲಾಡಳಿತ ನೀಡಿರುವ ಪಾಸ್ಗಳನ್ನು, ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪವು ಸಹ ಕೇಳಿ ಬಂದಿದೆ. ರೈತರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.
ಚಿಕ್ಕಮಗಳೂರಲ್ಲಿ ಈವರೆಗೂ ಯಾವುದೇ ಕೊರೊನಾ ಪಾಸಿಟಿವ್ ಕಂಡು ಬಂದಿಲ್ಲ. ಆದರೂ ನಾವು ಮರೆಯುವಂತಿಲ್ಲ. ರೈತರಿಗೆ ಬೇಕಾದ ಬೀಜ ಹಾಗೂ ಗೊಬ್ಬರ ಸರಬರಾಜು ಆಗಬೇಕಿದೆ. ಸರಬರಾಜಿಗೆ ಸರ್ಕಾರ ಈಗಾಗಲೇ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದ್ದು, ರೈತರು ಧೈರ್ಯವಾಗಿ ಮಳೆಯ ನಂತರ ತಮ್ಮ ಬಿತ್ತನೆ ಕಾರ್ಯವನ್ನು ಪ್ರಾರಂಭ ಮಾಡಬಹುದು ಎಂದಿದ್ದಾರೆ.