ಚಿಕ್ಕಮಗಳೂರು: ಸಿಎಂ ಪರಿಹಾರ ನಿಧಿ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡ್ಡಿಯೂರಪ್ಪ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಚಿಕ್ಕಮಗಳೂರಿನ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಮಂಜುನಾಥ ಎಂಬುವರನ್ನು ಅಮಾನತು ಮಾಡಲಾಗಿದೆ.
ಮಂಜುನಾಥ್ ಚಿಕ್ಕಮಗಳೂರು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸಿಎಂ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ ಹಿನ್ನೆಲೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಶಿಸ್ತು ಪ್ರಾಧಿಕಾರ ಅಮಾನತು ಆದೇಶ ಹೊರಡಿಸಿದೆ.
ಹಲೋ ಸಿಎಂ ಸಾಹೇಬ್ರೆ ಫ್ರೀ ಇದ್ದೀರಾ, ಕೊರೊನಾ ಪರಿಹಾರಕ್ಕೆ ಜನರ ಹತ್ತಿರ ದುಡ್ಡು ಕೇಳುತ್ತಿದ್ದೀರಾ, ದುಡ್ಡು ಎಲ್ಲಿದೆ ಅಂತ ಲಿಸ್ಟ್ ಇಲ್ಲಿದೆ ನೋಡಿ ಎಂದು ಮುಖ್ಯಮಂತ್ರಿ ವಿರುದ್ಧ ಆಡಿಯೋ ಕ್ಲಿಪ್ ಪೋಸ್ಟ್ ಮಾಡಿ ಎಲ್ಲೆಡೆ ವೈರಲ್ ಮಾಡಿದ್ದರು. ಈ ಹಿನ್ನೆಲೆ ಇವರ ಮೇಲೆ ಶಿಸ್ತು ಕ್ರಮ ಜರುಗಿಸಿ ಪದವಿ ಪೂರ್ವ ಶಿಕ್ಷಣ ಇಲಾಖೆ ಅಮಾನತು ಆದೇಶ ಹೊರಡಿಸಿದೆ.