ಚಿಕ್ಕಮಗಳೂರು: ಪೌರ ಕಾರ್ಮಿಕರು ಇಷ್ಟು ದಿನ ಮನೆಯಲ್ಲಿರುವ ಹಾಗೂ ರಸ್ತೆಯ ಪಕ್ಕದಲ್ಲಿರುವ ಕಸವನ್ನು ತೆಗೆದುಕೊಂಡು ಹೋಗಿ ಸ್ವಚ್ಛತೆಯನ್ನು ಕಾಪಾಡುತ್ತಿದ್ದರು. ಆದರೆ ಜಿಲ್ಲೆಯ ತರೀಕೆರೆ ತಾಲೂಕಿನ ಪೌರ ಕಾರ್ಮಿಕರು ಒಂದು ಹೆಜ್ಜೆ ಮುಂದೆ ಹೋಗಿ ಕೆರೆಯನ್ನು ಸ್ವಚ್ಛ ಮಾಡಲು ಮುಂದಾಗಿದ್ದಾರೆ.
ತರೀಕೆರೆ ನಗರದಲ್ಲಿ ನಾಲ್ಕು ಎಕರೆ ವಿಸ್ತಿರ್ಣದಲ್ಲಿರುವ ಐತಿಹಾಸಿಕ ಚೀಕೆರೆ ಹಲವಾರು ವರ್ಷಗಳಿಂದ ಕಸ, ಕಡ್ಡಿ, ತ್ಯಾಜ್ಯ ತುಂಬಿ ಗಬ್ಬು ನಾರುತ್ತಿತ್ತು. ಈ ಕೆರೆಯ ಸುತ್ತಮುತ್ತ ನಾಲ್ಕೈದು ದೇವಸ್ಥಾನಗಳಿದ್ದು ದೇವಸ್ಥಾನಕ್ಕೆ ಬರುವ ಭಕ್ತರಿಗೂ ಕೆರಯ ದುರ್ನಾತ ಕಂಗೆಡಿಸಿತ್ತು. ಹೀಗಾಗಿ, ತರೀಕೆರೆಯಲ್ಲಿರುವ ಎಲ್ಲಾ ಪೌರ ಕಾರ್ಮಿಕರು ಈ ಕೆರೆಯನ್ನು ಸ್ವಚ್ಛ ಮಾಡುವುದಕ್ಕೆ ಮುಂದಾಗಿದ್ದು, ಕೆರೆಗೆ ಇಳಿದು ಕೆರೆಯಲ್ಲಿರುವ ಎಲ್ಲಾ ತ್ಯಾಜ್ಯ, ಗಲೀಜುಗಳನ್ನು ಹೊರೆ ತೆಗೆಯುತ್ತಿದ್ದಾರೆ.
ಓದಿ: ಕಬಿನಿ ಹಿನ್ನೀರಿನಲ್ಲಿ ಒಂದೇ ಕಡೆ ಐದು ಹುಲಿ ದರ್ಶನ : ಸಂತಸಗೊಂಡ ಪ್ರವಾಸಿಗರು
ಈ ಹಿಂದೆ ಇದ್ದಂತೆ ಈ ಕೆರೆಯ ಸೌಂದರ್ಯವನ್ನು ಮತ್ತೆ ತರುವ ಪ್ರಯತ್ನವನ್ನು ಇಲ್ಲಿನ ಪೌರ ಕಾರ್ಮಿಕರು ಮಾಡುತ್ತಿದ್ದು, ನಗರದಲ್ಲಿರುವ ಎಲ್ಲಾ ಪೌರ ಕಾರ್ಮಿಕರು ಈ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ಸ್ಥಳೀಯರು ಹಲವಾರು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಆದರೇ ಈಗ ಪೌರ ಕಾರ್ಮಿಕರೇ ಕೆರೆ ಸ್ವಚ್ಛತೆಗೆ ಮುಂದಾಗಿರೋದಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.