ಚಿಕ್ಕಮಗಳೂರು : ನಮ್ಮ ರಾಜ್ಯದಲ್ಲಿ ಸಾಕಷ್ಟು ಗಣೇಶನ ದೇವಸ್ಥಾನಗಳಿವೆ. ಪ್ರತಿಯೊಂದು ಗಣೇಶನ ದೇವಾಲಯಕ್ಕೂ ಅದರದ್ದೇ ಆದ ಇತಿಹಾಸ, ವಿಶೇಷತೆಗಳಿವೆ. ಇಲ್ಲೊಂದೆಡೆ, ಹಚ್ಚ ಹಸಿರಿನಿಂದ ಕೂಡಿದ ಪ್ರಕೃತಿ ಸೌಂದರ್ಯದ ಮಧ್ಯೆ ನೆಲೆ ನಿಂತಿರುವ ಈ ಗಣೇಶ ಪವಾಡವನ್ನೂ ಸೃಷ್ಟಿಸುತ್ತಾನಂತೆ. ಅನೇಕ ಸೋಜಿಗಗಳನ್ನು ಹೊಂದಿರುವ ದೇವಸ್ಥಾನಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.
ಕಮಂಡಲ ಗಣಪತಿ ದೇವಸ್ಥಾನವು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಕೆಸವೆ ಗ್ರಾಮದಲ್ಲಿದೆ. ಒಮ್ಮೆ ಶನಿ ದೇವನ ಕಾಟದಿಂದ ಪಾರಾಗಲು ಪಾರ್ವತಿ ದೇವಿಯು ಭೂಮಿಗಿಳಿದು ಬಂದು, ಮೈಗವಧೆ ಎಂಬಲ್ಲಿ ತಪಸ್ಸು ಮಾಡುತ್ತಾಳೆ. ಅಲ್ಲಿಂದ ಈ ದೇವಾಲಯವಿರುವ ಸ್ಥಳಕ್ಕೆ ಬಂದು ಗಣೇಶನಿಗೆ ಪೂಜೆ ಮಾಡಲು ಸಿದ್ಧಳಾಗುತ್ತಾಳೆ. ಆದರೆ ಪೂಜೆಗೆ ನೀರಿರುವುದಿಲ್ಲ. ನೀರಿಗಾಗಿ ಬ್ರಹ್ಮದೇವನನ್ನು ಬೇಡಿಕೊಂಡಾಗ, ಬ್ರಹ್ಮದೇವ ಭೂಮಿಗೆ ಬಾಣ ಹೊಡೆದು ನೀರು ಸೃಷ್ಟಿಸಿದ ಎಂಬುದು ಇಲ್ಲಿನ ಪುರಾಣ ಪ್ರಸಿದ್ಧ ನಂಬುಗೆ.
ಇದನ್ನು ಬ್ರಾಹ್ಮಿ ನದಿಯ ಉಗಮ ಸ್ಥಾನವೆಂತಲೂ ಹೇಳಲಾಗುತ್ತದೆ. ಈ ದೇಗುಲದಿಂದ 18 ಕಿ.ಮೀ ದೂರದ ಮೃಗವಧೆ ಎಂಬಲ್ಲಿ ತಪಸ್ಸು ಮಾಡಿದ ಪಾರ್ವತಿ ದೇವಿ, ತಪಸ್ಸಿನ ಬಳಿಕ ವಿಘ್ನೇಶ್ವರನ ಪೂಜೆ ಮಾಡಲು ನೀರಿಲ್ಲ ಎಂದಾಗ ಬ್ರಹ್ಮ ಬಾಣ ಬಿಟ್ಟು ಪಾರ್ವತಿಯ ಪೂಜೆಗಾಗಿ ನೀರು ತರಿಸಿದ ಸ್ಥಳವೇ ಇದು. ಅಂದಿನಿಂದಲೂ ಇಲ್ಲಿ ನೀರು ನಿಂತಿಲ್ಲ. ಬ್ರಹ್ಮನ ಬಾಣದಿಂದ ಕಮಲದ ಹೂವಿನ ಆಕಾರದಲ್ಲಿ ಮೂಡಿದ ನೀರಿನ ಬುಗ್ಗೆ ಇಂದಿಗೂ ಅದೇ ಆಕಾರದಲ್ಲಿ ಹರಿಯುತ್ತಿರುವುದರಿಂದ ಕಾಲಕ್ರಮೇಣ ಕಮಂಡಲ ಗಣಪತಿ ದೇಗುಲವಾಗಿದೆ.
ಮಳೆಗಾಲದಲ್ಲಿ ವಿಘ್ನೇಶ್ವರನ ಪಾದದ ತನಕವೂ ಉಕ್ಕೋ ನೀರು ಬೇಸಿಗೆಯಲ್ಲಿ ತುಸು ಕಡಿಮೆ ಹರಿಯುತ್ತೆ. ಆದ್ರೆ, ಇತಿಹಾಸದಿಂದಲೂ ಇಲ್ಲಿ ನೀರು ಬತ್ತಿದ ಉದಾಹರಣೆಗಳಿಲ್ಲ. ಮಳೆಗಾಲದಲ್ಲಿ ತೀರ್ಥದ ನೀರು ಗಣೇಶನ ಪಾದದವರೆಗೆ ಬರುತ್ತದೆ. ಈ ಪುರಾಣ ಪ್ರಸಿದ್ಧ ಗಣೇಶನಿಗೆ ಹರಕೆ ಸಲ್ಲಿಸಿದರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬ ನಂಬಿಕೆಯಿಂದಲೇ ಭಕ್ತಾದಿಗಳು ಬರುತ್ತಾರೆ.
ಇಲ್ಲಿನದು ಯೋಗ ಮುದ್ರೆ ಗಣಪ. ಚಕ್ಕಲು-ಬಕ್ಕಲು ಹಾಕಿಕೊಂಡು ಯೋಗಕ್ಕೆ ಕೂತಿರೋ ಭಂಗಿಯಲ್ಲಿದ್ದಾನೆ. ಇಲ್ಲಿನ ವಿಘ್ನ ವಿನಾಶಕನ ಅತ್ಯಪರೂಪ ಮೂರ್ತಿ ಸಿಗೋದು ತುಂಬಾ ವಿರಳವಂತೆ. ಈ ರೀತಿಯ ವಿಗ್ರಹ ಬೇರೆ ಯಾವ ದೇವಸ್ಥಾನದಲ್ಲಿಯೂ ಕಾಣಸಿಗದು. ಈ ಗಣೇಶನ ವಿಗ್ರಹದ ಮುಂದೆ ಒಂದು ಕಮಲದ ಆಕಾರವಿರುವ ತೀರ್ಥ ಕುಂಡವೂ ಇದೆ. ಈ ತೀರ್ಥವನ್ನು ಕಮಂಡಲ ತೀರ್ಥ ಎಂದೂ ಕರೆಯುತ್ತಾರೆ. ಗಣೇಶನ ಮುಂದೆ ಕಮಲದ ಹೂವಿನಿಂದ ಉದ್ಭವದಂತೆ ಕಾಣುವ ತೀರ್ಥಕುಂಡವಿರುವುದರಿಂದ ಇಲ್ಲಿರುವ ಗಣೇಶನಿಗೆ ಕಮಂಡಲ ಗಣೇಶ ಎಂಬ ಹೆಸರು ಬಂದಿದೆ ಅಂತಲೂ ಹೇಳುತ್ತಾರೆ.
ಈ ನೀರಲ್ಲಿ ಸ್ನಾನ ಮಾಡಿದ್ರೆ ಶನಿ ದೋಷ ಪರಿಹಾರವಾಗುತ್ತದಂತೆ. ಓದುವ ಮಕ್ಕಳು ಇಲ್ಲಿನ ತೀರ್ಥ ಕುಡಿದ್ರೆ ಜ್ಞಾಪಕ ಶಕ್ತಿಯ ಜೊತೆ ಓದು ತಲೆಗೆ ಹತ್ತುತ್ತೆ ಎಂಬ ನಂಬಿಕೆಯೂ ಇದೆ. ಯೋಗ ಮುದ್ರೆಯ ಗಣೇಶನಿಗೆ ಹರಕೆ ಕಟ್ಟಿದ್ರೆ ಬೇಡಿದ ಹರಕೆ ಈಡೇರುತ್ತಂತೆ. ಈ ದೇವಾಲಯಕ್ಕೆ ಬಂದ ಪ್ರತಿಯೊಬ್ಬ ಭಕ್ತರು ಮೃಗವಧೆ ಸ್ಥಳಕ್ಕೆ ಹೋಗಿ ಅಲ್ಲಿಂದ ಇಲ್ಲಿಗೆ ಬಂದು ಪೂಜೆ ಮಾಡಿಸಿದ್ರೆ ಒಳ್ಳೆಯದಾಗುತ್ತಂತೆ. ಹಲವಾರು ಧಾರ್ಮಿಕ ಇತಿಹಾಸಕ್ಕೆ ಸಾಕ್ಷಿಯಾಗಿರೋ ಕಾಫಿನಾಡಿನ ಈ ಸ್ಥಳ ಸಾವಿರಾರು ಪ್ರವಾಸಿಗರು ಹಾಗೂ ಭಕ್ತರ ನೆಚ್ಚಿನ ತಾಣ. ಶೃಂಗೇರಿ ಹಾಗೂ ಹೊರನಾಡಿಗೆ ಬರುವ ಪ್ರವಾಸಿಗರಲ್ಲಿ ಈ ಕ್ಷೇತ್ರದ ಮಹಿಮೆ ಗೊತ್ತಿರುವವರು ಇಲ್ಲಿಗೆ ಬರುವುದನ್ನು ಮರೆಯೋದಿಲ್ಲ.
ಇದನ್ನೂ ಓದಿ: ಹಾವೇರಿಯಲ್ಲಿ ಗಣೇಶೋತ್ಸವಕ್ಕಾಗಿ ಅರಮನೆ ನಿರ್ಮಾಣ... ಗಣಪನ ವೀಕ್ಷಣೆಗೆ ಲಕ್ಷಾಂತರ ಜನರ ಭೇಟಿ