ಚಿಕ್ಕಮಗಳೂರು: ಪೋಷಕರ ಆಂಗ್ಲ ಮಾಧ್ಯಮದ ಮೇಲಿನ ವ್ಯಾಮೋಹವೋ, ಖಾಸಗಿ ಶಾಲೆಗಳಿಗೆ ಸರ್ಕಾರಿ ಶಾಲೆಗಳು ಪೈಪೋಟಿ ನೀಡಲು ಸಾಧ್ಯವಾಗುತ್ತಿಲ್ಲವೋ ಅಥವಾ ಸರ್ಕಾರ ಕೇಳಿದವರಿಗೆಲ್ಲ ಖಾಸಗಿ ಶಾಲೆಗಳಿಗೆ ಅನುಮತಿ ನೀಡುತ್ತಿರುವ ಕಾರಣವೋ ಗೊತ್ತಿಲ್ಲ. ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆಗಳಿಗೆ ಮಾತ್ರ ಬೀಗ ಬೀಳ್ತಾನೆ ಇದೆ. ಮಕ್ಕಳಿಗೆ ಬಿಸಿಯೂಟ, ಹಾಲು, ಮೊಟ್ಟೆ, ಸೈಕಲ್ ಅಂತೆಲ್ಲಾ ವಿವಿಧ ಯೋಜನೆಗಳನ್ನು ಜಾರಿಗೆ ತಂದರೂ ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳಲು ಆಗುತ್ತಿಲ್ಲ. ಕಾಫಿನಾಡಲ್ಲಿ 2023ರ ಒಂದೇ ವರ್ಷ 21 ಸರ್ಕಾರಿ ಶಾಲೆಗಳಿಗೆ ಬೀಗ ಬಿದ್ದಿದೆ.
ಹೌದು, ಈ ಒಂದೇ ವರ್ಷದಲ್ಲಿ ಚಿಕ್ಕಮಗಳೂರು ಜಿಲ್ಲೆಯೊಂದರಲ್ಲೇ 21 ಕನ್ನಡ ಶಾಲೆಗಳು ಬಂದ್ ಆಗಿವೆ. ಸರ್ಕಾರ ಮಧ್ಯಾಹ್ನದ ಬಿಸಿಯೂಟ, ಮೊಟ್ಟೆ-ಹಾಲು, ಶೂ-ಸಾಕ್ಸ್ ಅಂತೆಲ್ಲಾ ಹತ್ತಾರು ಯೋಜನೆಗಳನ್ನು ಜಾರಿಗೆ ತಂದರು ಸಹ, ಹೆತ್ತವರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಮೂಗು ಮುರಿಯುತ್ತಿದ್ದಾರೆ. ಇದರಿಂದ ಕಾಫಿನಾಡಲ್ಲಿ ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆಗಳಿಗೆ ಬೀಗ ಬೀಳುತ್ತಿರುವ ಪ್ರಮಾಣ ಕೂಡ ಹೆಚ್ಚಿದೆ.
ಜನರಿಗೆ ಸರ್ಕಾರದ ಎಲ್ಲಾ ಸೌಲಭ್ಯ ಬೇಕು. ಅಕ್ಕಿ, ಬಸ್ಸು, ಕರೆಂಟ್, ದುಡ್ಡು ಎಲ್ಲಾ ಬೇಕು. ಆದರೆ, ಸರ್ಕಾರಿ ಶಾಲೆ ಮಾತ್ರ ಬೇಡ. ಖಾಸಗಿ ಹಾಗೂ ಆಂಗ್ಲ ಮಾಧ್ಯಮದಲ್ಲಿ ಮಕ್ಕಳು ಓದುತ್ತಿದ್ದಾರೆ ಅಂದರೆ ಹೆತ್ತವರಿಗೆ ಡಿಗ್ನಿಟಿ. ಪೋಷಕರು ತಮ್ಮ ಘನತೆಗಾಗಿ ಸರ್ಕಾರಿ ಶಾಲೆಗಳಿಗೆ ಬೀಗ ಹಾಕಿಸುತ್ತಿದ್ದಾರೆ ಎಂಬುದು ಕೆಲ ಕನ್ನಡ ಪರ ಹೋರಾಟಗಾರರ ಮಾತಾಗಿದೆ.
ಸರ್ಕಾರ ಸರ್ಕಾರಿ ಶಾಲೆಗಳನ್ನು ಉಳಿಸೋಕೆ ನಾನಾ ಯೋಜನೆಗಳನ್ನು ಜಾರಿಗೆ ತಂದು ಪ್ರಯತ್ನ ಪಟ್ಟರೂ ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುತ್ತಿಲ್ಲ. ಹೀಗಾಗಿ ಸರ್ಕಾರಿ ಶಾಲೆಗಳು ಅವನತಿಯ ಅಂಚಿನಲ್ಲಿವೆ. ಕಳೆದ ಏಳೆಂಟು ವರ್ಷದಲ್ಲಿ 50ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿಗೆ ಶಾಶ್ವತ ಬೀಗ ಬಿದ್ದಿದೆ. ನೂರಾರು ಮಕ್ಕಳಿಗೆ ವಿದ್ಯಾದಾನ ಮಾಡಿದ ಸರ್ಕಾರಿ ಶಾಲೆಗಳಿಂದು ಪಾಳುಬಿದ್ದ ಕಟ್ಟಡಗಳಂತಾಗಿವೆ.
ಡಿಡಿಪಿಐ ರಂಗನಾಥ ಸ್ವಾಮಿ ಪ್ರತಿಕ್ರಿಯೆ: ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳಿಗೆ ಬೀಗ ಬೀಳುತ್ತಿರುವುದರ ಕುರಿತು ಡಿಡಿಪಿಐ ರಂಗನಾಥ ಸ್ವಾಮಿ ಪ್ರತಿಕ್ರಿಯಿಸಿದ್ದು, ಮಕ್ಕಳ ಸಂಖ್ಯೆ ಶೂನ್ಯ ಆಗಿರುವುದರಿಂದ ನಾವು ತಾತ್ಕಾಲಿಕವಾಗಿ ಮುಚ್ಚಿದ್ದೇವೆ. ಮಕ್ಕಳು ದಾಖಲಾದರೆ ಮತ್ತೆ ಶಾಲೆಗಳನ್ನು ತೆರೆಯುತ್ತೇವೆ. ಕೆಲವು ಮಕ್ಕಳು ಆರ್ಥಿಕವಾಗಿ ಸಬಲ ಆಗಿರುವುದರಿಂದ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಸೇರುತ್ತಾರೆ. ಆದ್ರೆ ನಮ್ಮ ಸರ್ಕಾರಿ ಶಾಲೆಗಳಲ್ಲಿ ಯಾವುದೇ ಶಿಕ್ಷಕರ ಸಮಸ್ಯೆ, ಕೊರತೆ ಇಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ರೋಗಿಯನ್ನು ಜೋಳಿಗೆಯಲ್ಲಿ ಕಟ್ಟಿ ಆಸ್ಪತ್ರೆಗೆ ಒಯ್ಯುವ ಗ್ರಾಮಸ್ಥರು.. ಇದು ಹೀನಾರಿ ಗ್ರಾಮದ ನರಕಯಾತನೆ