ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ಭಾಗ ಹಾಗೂ ಚಾರ್ಮಾಡಿ ಘಾಟಿಯಲ್ಲಿ ನಿರಂತರ ಮಳೆ ಸುರಿಯುತ್ತಿರುವ ಕಾರಣ ಅಲ್ಲಲ್ಲಿ ಗುಡ್ಡ ಕುಸಿತ ಹಾಗೂ ಭೂ ಕುಸಿತ ಸಂಭವಿಸಿದೆ. ಈ ಹಿನ್ನೆಲೆ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧ ಮಾಡಲಾಗಿತ್ತು.
ಈ ಭಾಗದಲ್ಲಿ ಇಂದು ಮಳೆ ಸ್ವಲ್ವ ಮಟ್ಟಿಗೆ ಕಡಿಮೆಯಾಗಿರುವ ಕಾರಣ ಚಾರ್ಮಾಡಿ ಘಾಟಿಯ ರಸ್ತೆಯಲ್ಲಿ ಸೃಷ್ಟಿಯಾದ ಅವಾಂತರಗಳನ್ನು ನಾವು ನೋಡಬಹುದಾಗಿದೆ. ಘಾಟಿಯ ಐದಾರೂ ಭಾಗದಲ್ಲಿ ಗುಡ್ಡ ಕುಸಿತ ಉಂಟಾಗಿದ್ದು, ನೂರಾರು ಮರಗಳು ಧರೆಗುರುಳಿವೆ. ಗುಡ್ಡದ ಎಲ್ಲಾ ಮಣ್ಣು ರಸ್ತೆಗೆ ಬಂದು ಬಿದ್ದಿದೆ. ನಿಜಕ್ಕೂ ಇದು ಚಾರ್ಮಾಡಿ ಘಾಟಿ ರಸ್ತೆಯೇ ಎಂದು ಪ್ರಶ್ನಿಸುವಂತಾಗಿದೆ.
ಮಳೆ ನಿಂತರೂ ನೀರಿನ ಹರಿವು ಮಾತ್ರ ಈ ರಸ್ತೆಯಲ್ಲಿ ನಿರಂತರವಾಗಿ ಇದೆ. ರಸ್ತೆಯಲ್ಲಿ ಹತ್ತಾರೂ ಕೃತಕ ಫಾಲ್ಸ್ಗಳು ನಿರ್ಮಾಣ ಆಗಿದ್ದು, ಈ ರಸ್ತೆ ಸಂಪೂರ್ಣ ಹಾಳಾಗಿ ಹೋಗಿದೆ. ದೊಡ್ಡ ದೊಡ್ಡ ಬಂಡೆಗಳು ರಸ್ತೆಗೆ ಬಂದು ಅಪ್ಪಳಿಸಿದ್ದು, ತೆರವು ಕಾರ್ಯಾಚರಣೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಸಂಚಾರಕ್ಕೂ ತೊಂದರೆ ಆಗಬಹುದಾಗದ ಲಕ್ಷಣಗಳಿವೆ.