ಚಿಕ್ಕಮಗಳೂರು: ಬೃಹತ್ ಗಾತ್ರದ ಹೆಬ್ಬಾವನ್ನು ಸೆರೆ ಹಿಡಿಯುವಲ್ಲಿ ಉರಗ ತಜ್ಞ ನರೇಶ್ ಯಶಸ್ವಿಯಾಗಿದ್ದಾರೆ. ತಾಲೂಕಿನ ಚಿನ್ನಿಮಕ್ಕಿ ಗ್ರಾಮದ ತಾರೇಶ್ ಅವರ ಮನೆಯ ಪಕ್ಕದ ಕಾಫೀ ತೋಟದಲ್ಲಿ ವಾಸವಾಗಿದ್ದ ಬರೋಬ್ಬರಿ 14 ಅಡಿ ಉದ್ದದ ಸುಮಾರು 25 ಕೆಜಿ ತೂಕದ ಹೆಬ್ಬಾವು ಇದಾಗಿತ್ತು.
ತೋಟದಲ್ಲಿ ಆಗಾಗಾ ಸಂಚಾರ ಮಾಡುತ್ತಿದ್ದ ಈ ಬೃಹತ್ ಗಾತ್ರದ ಹೆಬ್ಬಾವನ್ನು ತಾರೇಶ್ ಕುಟುಂಬದ ಸದಸ್ಯರು ಹಲವು ಬಾರಿ ಕಂಡಿದ್ದರು. ಆದರೆ, ಎಷ್ಟೇ ಹುಡುಕಿದರೂ ಸಿಕ್ಕಿರಲಿಲ್ಲ. ಮರದ ಮೇಲೆ ಮಲಗಿ ಬೇಟೆಗಾಗಿ ಹೊಂಚು ಹಾಕಿ ಕುಳಿತಿದ್ದನ್ನು ನೋಡಿದ ತಾರೇಶ್, ಕೂಡಲೇ ನರೇಶ್ಗೆ ಕರೆ ಮಾಡಿದ್ದರು.
ಸ್ಥಳಕ್ಕಾಗಮಿಸಿದ ಉರಗ ತಜ್ಞ ನರೇಶ್ ಹೆಬ್ಬಾವು ಹಿಡಿಯಲು ಕೆಲಕಾಲ ಹರಸಾಹಸ ಪಡಬೇಕಾಯಿತು. ಸೆರೆ ಹಿಡಿಯುವ ವೇಳೆ ಆತಂಕದ ವಾತಾವರಣ ಕೂಡ ನಿರ್ಮಾಣವಾಗಿತ್ತು. ಮರದ ಮೇಲಿಂದ ಬಿದ್ದಂತಹ ಹೆಬ್ಬಾವು ನಂತರ ಕಲ್ಲಿನ ಪೊಟರೆಯಲ್ಲಿ ಅವಿತು ಮಲಗಿತ್ತು.
ಕೂಡಲೇ ಪತ್ತೆ ಹಚ್ಚಿದ ನರೇಶ್ ತಮ್ಮ ಕೈಯಿಂದ ಹೆಬ್ಬಾವಿನ ಕುತ್ತಿಗೆ ಹಿಡಿದಾಗ ಅವರ ಕೈ ಸುತ್ತಿಕೊಳ್ಳಲು ಪ್ರಾರಂಭ ಮಾಡಿತ್ತು. ಇದನ್ನು ಗಮನಿಸಿದ ಸ್ಥಳೀಯರು ಹೆಬ್ಬಾವನ್ನು ನರೇಶ್ ಅವರ ಕೈಯಿಂದ ಬಿಡಿಸಿ ಆತಂಕದಿಂದ ದೂರ ಮಾಡಿದರು.
ಸೆರೆ ಹಿಡಿದ ಹೆಬ್ಬಾವಿನ ಗಾತ್ರ ನೋಡಿ ಗ್ರಾಮದ ಜನರು ಬೆಚ್ಚಿ ಬಿದ್ದಿದ್ದು, ಕೆಲವರು ಇದರ ಜೊತೆ ಫೋಟೋ ಸಹ ತೆಗೆದು ಕೊಂಡಿದ್ದಾರೆ. ನಂತರ ಸೆರೆ ಹಿಡಿದ ಹೆಬ್ಬಾವನ್ನು ಸುರಕ್ಷಿತವಾಗಿ ನಗರದ ಹೊರವಲಯದ ಅರಣ್ಯ ಪ್ರದೇಶಕ್ಕೆ ಬಿಡಲಾಯಿತು.
ಇದನ್ನೂ ಓದಿ: ನಾಯಿಮರಿ ಬಲಿ ಕೊಟ್ಟು ಅದರ ರಕ್ತ ಕುಡಿದ ಮಕ್ಕಳು..